ಹಂಪಾಪುರ ಗ್ರಾಮ ಪಂಚಾಯತಿಯ 20 ಲಕ್ಷ ವೆಚ್ಚದ ನೂತನ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ
ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಹಾಸನ- ಮೈಸೂರು ಚತುಷ್ಪಥ ರಸ್ತೆಗೆ 1250 ಕೋಟಿ ಮಂಜೂರಾಗಿದ್ದು ಹಾಸನ ಜಿಲ್ಲೆಯ ದೊಡ್ಡಕಾಡನೂರುನಿಂದ ಅರ್ಜುನಹಳ್ಳಿ ಗ್ರಾಮದ ವರೆಗೆ 578 ಕೋಟಿ ಹಣ ಬಿಡುಗಡೆಯಾಗಿದ್ದು ಮುಂದಿನ ತಿಂಗಳಲ್ಲಿ ಕಾಮಗಾರಿಗೆ ಚಾಲನೆ ದೊರೆಯಲಿದೆ ಎಂದು ಶಾಸಕ ಡಿ.ರವಿಶಂಕರ್ ಪ್ರಕಟಿಸಿದರು.
ತಾಲೂಕಿನ ಹಂಪಾಪುರ ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಬಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಕೆ.ಆರ್.ನಗರ ಸಮೀಪದ ಹಂಪಾಪುರ ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ರಸ್ತೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ಶೀಘ್ರ ದುರಸ್ತಿಯಾಗಲಿದೆ. ಅಲ್ಲದೆ ಪರಿಶಿಷ್ಟ ಸಮುದಾಯದವರು ವಾಸ ಮಾಡುತ್ತಿರುವ ಗ್ರಾಮದ ಬೀದಿಯಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಯೂ ಪ್ರಾರಂಭವಾಗಲಿದೆ ಎಂದರು.
ಗ್ರಾಮದ ಬಸ್ ನಿಲ್ದಾಣ ಶಿಥಿಲಾವಸ್ಥೆಯಲ್ಲಿದ್ದು, ಅದನ್ನು ನೆಲಸಮ ಮಾಡಿ ನೂತನ ನಿಲ್ದಾಣ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು. ಸಾಧ್ಯವಾದಷ್ಟು ಗ್ರಾಮ ಪಂಚಾಯಿತಿ ಸದಸ್ಯರು ರಸ್ತೆ ಮತ್ತು ಚರಂಡಿಗಳನ್ನು ಎನ್ ಆರ್‌ಎಜಿ ಅಡಿ ನಿರ್ಮಿಸಿದರೆ ಅನುಕೂಲ ಎಂದು ಹೇಳಿದರು.
ಬಡಕನ ಕೊಪ್ಪಲು ಮತ್ತು ಮಂಚನಹಳ್ಳಿಯನ್ನು ಕಂದಾಯ ಗ್ರಾಮಗಳನ್ನಾಗಿ ಸೇರ್ಪಡೆ ಮಾಡಲಾಗಿದೆ. ಅಲ್ಲದೆ ಮಂಚನಹಳ್ಳಿ ಗ್ರಾಮಕ್ಕೆ 1.50 ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ಇದರೊಂದಿಗೆ ಗ್ರಾಮದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಜನರು ಮನವಿ ಮಾಡಿದ್ದು, ಜಾಗ ಗುರುತಿಸಿಕೊಡುವಂತೆ
ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.
ಬಟಗನಹಳ್ಳಿಯಿಂದ ಮಿರ್ಲೆಗೆ ತೆರಳುವ ರಸ್ತೆಗೆ 3 ಕೋಟಿ, ಮಿರ್ಲೆ, ಗಂಧನಹಳ್ಳಿಗೆ 1 ಕೋಟಿ ರೂ., ಮಿರ್ಲೆಗೆ 1 ಕೋಟಿ ರೂ., ಬೀಚನಹಳ್ಳಿ ಕೊಪ್ಪಲು ಗ್ರಾಮಕ್ಕೆ 2 ಕೋಟಿ ರೂ.ಅನುದಾನ ನೀಡಲಾಗಿದೆ. ಕಪ್ಪಡಿ ಕ್ಷೇತ್ರದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ 25 ಕೋಟಿ ರೂ.ಬಿಡುಗಡೆಯಾಗಿದ್ದು ಶೀಘ್ರ ಟೆಂಡರ್ ಕರೆಯಲಾಗುವುದು ಎಂದರು.
ಸ್ಮಶಾನವಿಲ್ಲದೆ ಸನ್ಯಾಸಿಪುರ ಗ್ರಾಮದ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದು, ಅವರಿಗೆ ಸೂಕ್ತ ಜಾಗ ಗುರುತಿಸಿ ಕೊಡಿ ಎಂದು ತಹಸೀಲ್ದಾರ್ ಅವರಿಗೆ ತಿಳಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಹಂಪಾಪುರ ಗ್ರಾಮ ಪಂಚಾಯತಿಯ 20 ಲಕ್ಷ ವೆಚ್ಚದ ನೂತನ ಕಟ್ಟಡ ಕಾಮಗಾರಿಗೆ ಶಾಸಕ ಡಿ.ರವಿಶಂಕರ್ ಭೂಮಿ ಪೂಜೆ ನೆರವೇರಿಸಿದರು.
ತಹಸೀಲ್ದಾರ್ ಜಿ. ಸುರೇಂದ್ರ ಮೂರ್ತಿ, ತಾಪಂ ಇಓ ಕುಲದೀಪ್. ಲೋಕೋಪಯೋಗಿ ಇಲಾಖೆಯ ಎಇಇ ಸುಮಿತಾ, ಗ್ದಾ.ಪಂ.ಅಧ್ಯಕ್ಷೆ ರಮ್ಯಮಂಜುನಾಥ್, ಉಪಾಧ್ಯಕ್ಷ ಲೋಕೇಶ್, ಸದಸ್ಯರಾದ ನಾಗರಾಜ್, ನಾಗೇಶ್ ಹರಿರಾಜು, ಚೈತ್ರಲೋಕೇಶ್, ವಿದ್ಯಾನಾರಾಯಣ್, ಗೌರಮ್ಮ, ಮಹದೇವ್ ಕುಮಾರ್, ಪಿಡಿಓ ವಿ.ಎ.ಅಶ್ಬಿನಿ, ಕಾರ್ಯದರ್ಶಿ ಭಾರತಿ, ಹಂಪಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಪಿ.ಪ್ರಶಾಂತ್, ನಿರ್ದೇಶಕರಾದ ಎಂ.ಎಸ್. ಅನಂತ, ಪಿ.ಎಸ್.ದೇವರಾಜು, ಎಪಿಎಂಸಿ ಮಾಜಿ ಉಪಾಧ್ಯಕ್ಷ ಎಚ್.ಎಚ್.ನಾಗೇಂದ್ರ, ಮಾಜಿ ಸದಸ್ಯ ತೋಟಪ್ಪನಾಯಕ,ಕಾಂಗ್ರೆಸ್ ಮುಖಂಡರಾದ ಡಿವಿ ಗುಡಿ ನಂದೀಶ್, , ಹೆಬ್ಬಾಳುಸ್ವಾಮಿ ಇದ್ದರು.