ರಾಮನಗರ:ಕೂಸಿನ ಮನೆಗೆ ಬರುವ ಮಕ್ಕಳನ್ನು ಆರೈಕೆ ಮಾಡುವಾಗ ಬೇದ-ಬಾವ ಮಾಡದೆ ಮಾತೃತ್ವ ಭಾವದಿಂದ ನೋಡಿಕೊಳ್ಳುವ ಜವಾಬ್ದಾರಿ ಕೂಸಿನ ಮನೆಯ ಆರೈಕೆದಾರರ ಮೇಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಗ್ವಿಜಯ್ ಬೋಡ್ಕೆ ಅವರು ತಿಳಿಸಿದರು.
ಅವರು ರಾಮನಗರ ಜಿಲ್ಲಾ ಪಂಚಾಯಿತಿಯ ಸಂಪನ್ಮೂಲ ಕೇಂದ್ರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯಿತಿ ರಾಮನಗರ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಕೂಸಿನ ಮನೆಯ ಮಕ್ಕಳ ಆರೈಕೆದಾರರ ತರಬೇತಿ ಕಾರ್ಯಾಗಾರಕ್ಕೆ ಭೇಟಿ ನೀಡಿ ಮಾತನಾಡಿದರು.
ಕೂಸಿನಮನೆ ಯೋಜನೆ ರಾಜ್ಯ ಸರ್ಕಾರದ ಬಜೆಟ್ ನ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಿ ಮಕ್ಕಳ ಬೌದ್ದಿಕತೆ, ಮಾನಸಿಕ, ಆರೋಗ್ಯಯುತವಾಗಿ ನೋಡಿಕೊಳ್ಳುವುದು ಆರೈಕೆದಾರರ ಮೇಲೆ ಇರುತ್ತದೆ. ಈ ನಿಟ್ಟಿನಲ್ಲಿ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿದ್ದು, ಶಿಬಿರ ಏಳು ದಿನಗಳವರೆಗೆ ನಡೆಯುತ್ತದೆ. ಎಲ್ಲರೂ ಉತ್ತಮ ರೀತಿಯಲ್ಲಿ ತರಬೇತಿ ಪಡೆಯಬೇಕು ಎಂದು ಹೇಳಿದರು.
ಕೂಸಿನ ಮನೆಗಳು ಬಡವರ ಪಾಲಿಗೆ ವರದಾನವಾಗಬೇಕು, ನರೇಗಾ ಯೋಜನೆಯಡಿ ಉದ್ಯೋಗ ಖಾತ್ರಿ ಕೆಲಸಕ್ಕೆ ಹೋಗುವಾಗ ತಮ್ಮ ಮಕ್ಕಳನ್ನು ಕೂಸಿನ ಮನೆಯಲ್ಲಿ ಬಿಟ್ಟು ಹೋಗುತ್ತಾರೆ. ಅಂತಹ ಮಕ್ಕಳ ಆರೈಕೆಯ ಜವಾಬ್ದಾರಿ ನಿಮ್ಮಮಗಳ ಮೇಲೆ ಇರುತ್ತದೆ. ಪ್ರತಿಯೊಬ್ಬರು ತರಬೇತಿ ಸದುಪಯೋಗ ಪಡೆದುಕೊಂಡು ಜಿಲ್ಲೆಯಲ್ಲಿ ಕೂಸಿನ ಮನೆಯನ್ನು ಮಾದರಿಯನ್ನಾಗಿ ಮಾಡಬೇಕು ಜೊತೆಗೆ ಎಲ್ಲರೂ ಒಗ್ಗಟ್ಟಾಗಿ ಕೂಸಿನ ಮನೆ ಯೋಜನೆ ಯಶಸ್ವಿಗೊಳಿಸಬೇಕಾಗಿದೆ. ಜಿಲ್ಲೆಯಲ್ಲಿ ಉತ್ತಮವಾಗಿ ಕೂಸಿನ ಮನೆ ನಿರ್ವಹಣೆ ಮಾಡುವ ಆರೈಕೆದಾರರಿಗೆ ಪ್ರಶಸ್ತಿ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಪಂಚಾಯತ್ ಮುಖ್ಯ ಯೋಜನಾಧಿಕಾರಿ ಚಿಕ್ಕಸುಬ್ಬಯ್ಯ, ಯೋಜನಾ ನಿರ್ದೇಶಕರಾದ ಮಂಜುನಾಥ ಸ್ವಾಮಿ, ಸಹಾಯಕ ಕಾರ್ಯದರ್ಶಿ ಜೈಪಾಲ್, ಸಹಾಯಕ ಯೋಜನಾಧಿಕಾರಿ ಲೋಕೇಶ್, ನರೇಗಾ ಶಾಖೆಯ ಅಧಿಕಾರಿ ಜಗದೀಶ್, ನರೇಗಾ ಶಾಖೆ ಜಿಲ್ಲಾ ಐಇಸಿ ಸಂಯೋಜಕರಾದ ಅರುಣ್ ಕುಮಾರ್ ಸಿ.ಜಿ., ಮಾಸ್ಟರ್ ಟ್ರೈನರ್, ಕೂಸಿನ ಮನೆಯ ಆರೈಕೆದಾರರು ಭಾಗವಹಿಸಿದ್ದರು.