ಮಂಡ್ಯ:ಈ ಬಾರಿಯ ಜಿ.20 ಶೃಂಗ ಸಭೆಯ ಅಧ್ಯಕ್ಷತೆಯನ್ನು ಭಾರತ ದೇಶ ವಹಿಸಿದ್ದು, ದೇಶ ಮತ್ತು ವಿದೇಶದ ಅತಿಥಿ ಗಣ್ಯರು ಆಗಸ್ಟ್ 2 ರಂದು ಶ್ರೀರಂಗಪಟ್ಟಣಕ್ಕೆ ಭೇಟಿ ನೀಡಲಿದ್ದಾರೆ. ಜಿಲ್ಲಾಡಳಿತದಿಂದ ಅವರನ್ನು ಸ್ವಾಗತಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ: ಕುಮಾರ ಅವರು ಅಧಿಕಾರಿಗಳಿಗೆ ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜುಲೈ 30 ರಿಂದ ಆಗಸ್ಟ್ 3 ರವರೆಗೆ ಮೈಸೂರಿನಲ್ಲಿ ಥಿಂಕ್ 20. ಸಮಿಟ್ ನಡೆಯಲಿದೆ. ಇದರಲ್ಲಿ ಭಾಗವಹಿಸುವ 150ಕ್ಕೂ ಹೆಚ್ಚು ಗಣ್ಯರು ಆಗಸ್ಟ್ 2 ರಂದು ಶ್ರೀರಂಗಪಟ್ಟಣಕ್ಕೆ ಭೇಟಿ ನೀಡಲಿದ್ದಾರೆ ಎಂದರು.
ಆಗಸ್ಟ್ 2 ರಂದು ಸಂಜೆ 6 ಗಂಟೆಗೆ ದರಿಯಾ ದೌಲತ್, 6-30 ಗಂಟೆಗೆ ರಂಗನಾಥ ಸ್ವಾಮಿ ದೇವಲಾಯ, 7-15 ಗಂಟೆಗೆ ಬೃಂದಾವನ ಗಾರ್ಡನ್ ಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರುಗಳು ಸ್ವಾಗತಿಸಿ ಅವರಿಗೆ ಭದ್ರತೆಯ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು. ಅತಿಥಿಗಳು ಭೇಟಿ ನೀಡುವ ಸ್ಥಳಗಳಿಗೆ ಅಧಿಕಾರಿಗಳು ಮೊದಲೇ ಭೀಟಿ ನೀಡಿ ಸ್ಥಳ ಪರಿಶೀಲನೆ ಮಾಡಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸುತ್ತಮುತ್ತಲು ವಿದ್ಯುತ್ ದೀಪಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿರುವುದನ್ನು ಖಾತ್ರಿ ಪಡಿಸಿಕೊಳ್ಳಿ. ರಸ್ತೆಗಳನ್ನು ಸರಿಪಡಿಸಬೇಕು. ದರಿಯಾ ದೌಲತ್ ಹಾಗೂ ಕೆ.ಆರ್.ಎಸ್ ನಲ್ಲಿ ಅತಿಥಿಗಳನ್ನು ಸ್ವಾಗತಿಸಲು ಉತ್ತಮ ಕಲಾ ತಂಡವನ್ನು ನಿಯೋಜಿಸಿ. ಅತಿಥಿಗಳಿಗೆ ಉಪಹಾರದ ವ್ಯವಸ್ಥೆ ಮಾಡುವಂತೆ ತಿಳಿಸಿದರು.
ಸಭೆಯಲ್ಲಿ ಪಾಂಡವಪುರ ಉಪವಿಭಾಗಾಧಿಕಾರಿ ನಂದೀಶ್, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ರಂಗಸ್ವಾಮಿ, ಕಾವೇರಿ ನೀರಾವರಿ ನಿಗಮ ನಿಯಮಿತದ ಅಧೀಕ್ಷಕ ಅಭಿಯಂತರ ರಘುರಾಮ್, ಮಿಮ್ಸ್ ನಿರ್ದೇಶಕ ಡಾ: ಮಹೇಂದ್ರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಮೋಹನ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.