ನವದೆಹಲಿ: ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ೧೮ನೇ ಜಿ೨೦ ಶೃಂಗಸಭೆಯ ಮೊದಲ ದಿನದ ಸಭೆ ಯಶಸ್ವಿಯಾಗಿ ನಡೆಯಿತು. ೨ನೇ ಮತ್ತು ಕೊನೆಯ ದಿನವಾದ ಇಂದು ವಿಶ್ವದ ಗಣ್ಯರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಸಮಾಧಿಗೆ ನಮಿಸಿದರು. ಬಳಿಕ ಸಮಾಧಿ ಬಳಿ ಶಾಂತಿಗೀತೆ ಗಾಯನದಲ್ಲಿ ಪಾಲ್ಗೊಂಡರು.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಮತ್ತು ಐಎಂಎಫ್ ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜಿವಾ ರಾಜ್‌ಘಾಟ್‌ಗೆ ಭೇಟಿ ನೀಡಿದ ಮೊದಲಿಗರು. ಬಳಿಕ ಯುಎಸ್ ಅಧ್ಯಕ್ಷ ಜೋ ಬೈಡನ್, ಯುಕೆ ಪಿಎಂ ರಿಷಿ ಸುನಕ್, ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ, ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಮತ್ತು ಇತರ ರಾಷ್ಟ್ರಗಳ ಮುಖ್ಯಸ್ಥರು,
ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನಾಥ್ ಅವರು ರಾಜ್‌ಘಾಟ್‌ಗೆ ಆಗಮಿಸಿ ಮಹಾತ್ಮ ಗಾಂಧೀಜಿ ಸಮಾಧಿಗೆ ಪುಷ್ಪಗುಚ್ಛ ಅರ್ಪಿಸಿದರು. ಸ್ಪೇನ್ ಉಪಾಧ್ಯಕ್ಷ ನಾಡಿಯಾ ಕ್ಯಾಲ್ವಿನೋ, ಸಿಂಗಾಪುರದ ಪ್ರಧಾನಿ ಲೀ ಸೀನ್ ಲೂಂಗ್ ಹಾಗೂ ಓಮನ್‌ನ ಉಪಪ್ರಧಾನಿ ಅಸಾದ್ ಬಿನ್ ತಾರಿಕ್ ಬಿನ್ ತೈಮೂರ್ ಅಲ್ ಸೈದ್ ಅವರು ಮಹಾತ್ಮ ಗಾಂಧಿ ಸಮಾಧಿಗೆ ಗೌರವ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು.
ಜಿ೨೦ ಇಂದಿನ ವೇಳಾಪಟ್ಟಿ: ಮಧ್ಯಾಹ್ನ ೧೨.೩೦ರವರೆಗೆ ‘ಒಂದು ಭವಿಷ್ಯ’ ವಿಚಾರವಾಗಿ ಜಿ೨೦ ಶೃಂಗಸಭೆ ನಡೆಯಲಿದೆ. ಸಭೆಯ ಅಂತ್ಯದಲ್ಲಿ ನಿರ್ಣಯ ಮಂಡನೆ, ಒಪ್ಪಿಗೆ, ಮುಂದಿನ ಶೃಂಗಸಭೆ ನಡೆಯುವ ದೇಶಕ್ಕೆ ಅಧ್ಯಕ್ಷೀಯ ಜವಾಬ್ದಾರಿ ಹಸ್ತಾಂತರಿಸಲಾಗುತ್ತದೆ.