ವರದಿ : ಚಪ್ಪರದಹಳ್ಳಿ ವಿನಯ್ ಕುಮಾರ್
ಬೆಟ್ಟದಪುರ : ಸಕಲ ಜೀವಿಗಳಿಗೆ ಒಳಿತನ್ನು ಬಯಸುವ ಸಂಸ್ಕೃತಿಯೇ ಬಸವ ಸಂಸ್ಕೃತಿ ಎಂದು ಗದುಗಿನ ಶ್ರೀ ಜಗದ್ಗುರು ತೋಂಟಾದಾರ್ಯ ಮಹಾ ಸಂಸ್ಥಾನ ಮಠದ ಜಗದ್ಗುರು ಡಾಕ್ಟರ್ ಶ್ರೀ ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಸಲೀಲಾಕ್ಯ ವಿರಕ್ತ ಮಠ ಮತ್ತು ಕನ್ನಡ ಮಠ ದ ವತಿಯಿಂದ ಆಯೋಜಿಸಿದ್ದ ಚಿಕ್ಕವೀರ ದೇಶಿ ಕೇಂದ್ರ ಸ್ವಾಮಿಗಳವರ 96ನೇ ಹಾಗೂ ಚನ್ನವೀರದೇಶಿ ಕೇಂದ್ರ ಸ್ವಾಮಿಗಳ 43ನೇ ಗಣರಾಧನೆ ಮತ್ತು ಕನ್ನಡ ಮಠದ 215ನೇ ಸ್ಥಾಪನ ವರ್ಷಾಚರಣೆ ಸಭಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು ಬೆಟ್ಟದಪುರದ ಕನ್ನಡ ಮಠದಲ್ಲಿ ಪ್ರತಿವರ್ಷ ಗಣರಾಧನಾ ಕಾರ್ಯಕ್ರಮ ಮಾಡಿಕೊಂಡು ಬರುತ್ತಿರುವುದು ಶ್ಲಾಘನೆಯ ವಿಷಯವಾಗಿದೆ. ಶರಣರ ಜ್ಞಾನದ ಮಾತು ಭಕ್ತರ ಕಿವಿಗೆ ಬೀಳಲಿ ಎಂಬುದು ಮಠದ ಪ್ರಮುಖ ಉದ್ದೇಶವಾಗಿರುತ್ತದೆ.
ಮನುಷ್ಯನಿಗೆ ಜ್ಞಾನ ಮುಖ್ಯವಾದುದು, ಇಲ್ಲವಾದಲ್ಲಿ ಇತರ ಪ್ರಾಣಿಗಳಿಗೆ ಸಮನಾಗುತ್ತಾನೆ, ಅನ್ನದಾಸೋಹ ನಡೆಸುವ ರೀತಿ ಭಕ್ತರಿಗೆ ಜ್ಞಾನ ದೊರೆಯಲಿ ಎಂದು ಜ್ಞಾನದಾಸೋಹವನ್ನು ಏರ್ಪಡಿಸಿರುತ್ತಾರೆ. ಇದರ ಉಪಯೋಗವನ್ನು ಪಡೆದುಕೊಂಡು ಭಕ್ತರು ಸನ್ಮಾರ್ಗದಲ್ಲಿ ನಡೆಯಬೇಕು ಎಂದರು.
ಸತ್ಯ ಮತ್ತು ನಿಷ್ಠೆಯಿಂದ ಕಾಯಕ ಮಾಡುವವನು ಮಾತ್ರ ಶ್ರೇಷ್ಠ ಭಕ್ತನಾಗಲು ಸಾಧ್ಯ, ಹಾಗೆಯೇ ಗುರುಗಳು ಕೂಡ ಸಮಾಜದ ಸೇವಕರಾಗಿ ಕೆಲಸ ಮಾಡಬೇಕು. ಆಗ ಮಾತ್ರ ಮಠ ಮಂದಿರಗಳು ಉದ್ದಾರವಾಗಲು ಸಾಧ್ಯವಾಗುತ್ತದೆ ಎಂದರು.
ಬೆಟ್ಟದಪುರ ಕನ್ನಡ ಮಠದ ಶ್ರೀ ಚನ್ನಬಸವ ದೇಶಿ ಕೇಂದ್ರ ಸ್ವಾಮಿಗಳು ಮಾತನಾಡಿ ಎಲ್ಲಾ ಮಠಾಧೀಶರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಭೆಗಳನ್ನು ಮಾಡುತ್ತಾ ಬಂದಿದ್ದಾರೆ. ಹಾಗೆ ನಾಡಿಗೆ ಒಳ್ಳೆಯ ಸೇವೆಯನ್ನು ಕೊಟ್ಟಿದ್ದಾರೆ. ವಿಶಿಷ್ಟವಾದ ಸೇವೆ ಸಲ್ಲಿಸುವ ಚಿಂತನೆಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಭಕ್ತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಎಂದರು. ಮುಖ್ಯವಾಗಿ ಸ್ವಾಮೀಜಿಗಳು ಮಠದ ಆಸ್ತಿಯನ್ನು ದುರುಪಯೋಗಪಡಿಸಿ ಕೊಳ್ಳದೆ ಮಠದ ಪರಂಪರೆಯನ್ನು ಉಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಸುಕ್ಷೇತ್ರ ಮಲ್ಲಯ್ಯನ ಮೂಲೆಮಠದ ಶ್ರೀ ಚನ್ನಬಸವ ಮಹಾಸ್ವಾಮಿಗಳು, ಮೈಸೂರು ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷ ಪ್ರದೀಪ್ ಕುಮಾರ್ ಮಾತನಾಡಿದರು. ಈ ಸಂದರ್ಭದಲ್ಲಿ ಕೊಳ್ಳೇಗಾಲ ತಾಲೂಕಿನ ಅಲಹಳ್ಳಿ ಮಠದ ಶ್ರೀ ಪಟ್ಟದ ಶಿವಕುಮಾರ ಸ್ವಾಮಿಗಳು, ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ದ್ವಿತೀಯ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಶಿವಾನಂದ ಸ್ವಾಮಿಗಳು, ಬೆಳಗಾಂನ ಶ್ರೀ ರುದ್ರಾಕ್ಷಿ ಮಠದ ಡಾಕ್ಟರ್ ಅಲ್ಲಮ ಪ್ರಭು ಮಹಾಸ್ವಾಮಿಗಳು, ನಿವೃತ್ತ ಕೆಎಎಸ್ ಅಧಿಕಾರಿ ಸಿಎಂ ಈಶ್ವರ್, ಶಿವಕುಮಾರ್ ಕೂರ್ಗಲ್ಲು, ಸೇರಿದಂತೆ ವಿವಿಧ ಮಠದ ಮಠಾಧೀಶರುಗಳು ಹಾಜರಿದ್ದರು.