ಚಾಮರಾಜನಗರ: ಗಾಂಧೀಜಿಯವರ ಸ್ವಾತಂತ್ರ್ಯ ಚಳುವಳಿ ಮಾದರಿ ಚಳುವಳಿ.ಅದಕ್ಕಿಂತಲೂ ಗಾಂಧೀಜಿಯ ಸರಳತೆ, ಪ್ರೀತಿ ,ಹೃದಯ ಸಂಪನ್ನತೆ, ಸರ್ವಭಾವ ,ಭಾವೈಕ್ಯತೆ ,ಅಹಿಂಸೆ, ಸತ್ಯಾಗ್ರಹ , ಸರಳತೆ ಅವರನ್ನು ಮಹಾತ್ಮರನ್ನಾಗಿಸಿ ವಿಶ್ವಕ್ಕೆ ಭಾರತದ ಗೌರವವನ್ನು ಇಮ್ಮಡಿಗೊಳಿಸಿದೆ ಎಂದು ಜಿಲ್ಲಾ ಯೋಜನಾ ಉಪ ಸಮನ್ವಯ ಅಧಿಕಾರಿಗಳಾದ ಎನ್ ಲಕ್ಷ್ಮೀಪತಿ ರವರು ತಿಳಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಓ. ಅರ್. ಪ್ರಕಾಶ್ ವಿರಚಿತ ನಾವು ಕಂಡೂ ಕಾಣದ ಗಾಂಧಿ ಕೃತಿ ಕುರಿತು ಪರಿಚಯಾತ್ಮಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತ ಗಾಂಧೀಜಿಯವರು ಭಾರತದ ಗುಜರಾತ್ ನಿಂದ ಆಫ್ರಿಕಾ ತೆರಳಿ ನಿರಂತರವಾಗಿ ಎರಡು ದಶಕಗಳಿಗೂ ಕಾಲ ಹೋರಾಟ ನಡೆಸಿದ ಗಾಂಧೀಜಿ, ಹೃದಯದಲ್ಲಿ ಭಗವಂತನಾಗಿ ಮಹಾತ್ಮರಾಗಿದ್ದಾರೆ. ಗಾಂಧೀಜಿಯವರ ಚಿಂತನೆಗಳು ವಿಶ್ವ ಮಾನ್ಯವಾಗಿದೆ ಎಂದರು.
ಲೇಖಕರು ಹಾಗೂ ಉಪನ್ಯಾಸಕರಾದ ಓ ಆರ್ ಪ್ರಕಾಶ್ ರವರು ಮಾತನಾಡಿ ಗಾಂಧೀಜಿಯ ದೂರದೃಷ್ಟಿ ಚಿಂತನೆ, ಹೋರಾಟದ ಮನೋಭಾವನೆ, ಅಹಿಂಸ ತತ್ವ, ಸತ್ಯಾಗ್ರಹ ಎಂಬ ತಾತ್ವಿಕ ಚಿಂತನೆಯೊಂದಿಗೆ ಅವರೊಬ್ಬರು ಉತ್ತಮ ವಕೀಲರಾಗಿ ,ಶ್ರೇಷ್ಠ ಪತ್ರಕರ್ತರಾಗಿ, ಬರಹಗಾರರಾಗಿ, ಮಾರ್ಗದರ್ಶಕರಾಗಿ ಹಲವು ಕೌಶಲ್ಯಗಳ ಸರ್ದಾರರಾಗಿ ಹೊರಹೊಮ್ಮಿದ ಮಹಾನ್ ವ್ಯಕ್ತಿತ್ವ. ಎಪ್ಪತ್ತು ದೇಶಗಳಲ್ಲಿ ಗಾಂಧೀಜಿಯವರ ಪ್ರತಿಮೆಯನ್ನು ಸ್ಥಾಪಿಸಿ ಗಾಂಧೀಜಿಯವರಿಗೆ ಗೌರವ ಸಲ್ಲಿಸುತ್ತಿರುವುದು ಭಾರತೀಯರಿಗೆ ಹೆಮ್ಮೆಯಾಗಿದೆ . ಆದರೆ ಭಾರತದಲ್ಲಿ ಗಾಂಧೀಜಿಯವರ ಬಗ್ಗೆ ವಿಚಿತ್ರವಾದ ತಿಳುವಳಿಕೆ ಮೂಡಿಸುತ್ತಿರುವುದು ಇತ್ತೀಚೆಗೆ ಬೆಳೆಯುತ್ತಿರುವ ಹೊಸ ಬೆಳವಣಿಗೆಯಾಗಿದೆ. ಮಂಡೇಲಾ ಮಾರ್ಟಿನ್ ಲೂಥರ್ ಕಿಂಗ್, ಅಬ್ದುಲ್ ಗಫರ್ ಖಾನ್ ಮುಂತಾದ ಸಾವಿರಾರು ಜನರು ಗಾಂಧಿಯಂತೆ ಪ್ರಖ್ಯಾತಿಯಾಗಿದ್ದಾರೆ. ಗಾಂಧೀಜಿ ಯಂತಹ ಮಹಾನ್ ವ್ಯಕ್ತಿಯ ಬಗ್ಗೆ ತಪ್ಪು ಸಂದೇಶ, ವಿಚಾರಗಳನ್ನು ಹರಡಿ ಆತ್ಮಕ್ಕೆ ದ್ರೋಹ ಬಗೆಯುವುದು ಸರಿಯಲ್ಲವೆಂದು ತಿಳಿಸಿದರು.
ನಿವೃತ್ತ ಜಿಲ್ಲಾ ಯೋಜನಾ ಉಪ ಸಮನ್ವಯ ಅಧಿಕಾರಿಗಳಾದ ಮಂಜುನಾಥ್ ಕೊಳ್ಳೇಗಾಲ ರವರು ನಾವು ಕಂಡು ಕಾಣದ ಗಾಂಧಿ ಪುಸ್ತಕದ ಹಲವು ಸಾಲುಗಳನ್ನು ಓದುವ ಮೂಲಕ ಉದ್ಘಾಟಿಸಿ ಮಾತನಾಡಿ ಓ ಆರ್ ಪ್ರಕಾಶ್ ರವರು ಉತ್ತಮ ಭಾಷಾ ಅಧ್ಯಯನಶೀಲರು, ಮಂಗಳೂರು ಶಿಕ್ಷಣ ಶಿಕ್ಷಕ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಹಲವಾರು ಕೃತಿಗಳನ್ನು ರಚಿಸಿರುವ ಪ್ರಕಾಶ್ ಅಧ್ಯಯನದ ಮೂಲಕ ಪುಸ್ತಕಗಳನ್ನು ರಚನೆ ಮಾಡಿ ಹೊಸ ಜ್ಞಾನಮಾರ್ಗದ ತಿಳುವಳಿಕೆಯನ್ನು ನೀಡುತ್ತಿರುವುದು ಹೆಮ್ಮೆಯಾಗಿದೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷರಾದ ಶೈಲ ಕುಮಾರ್ ಮಾತನಾಡಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ರವರ ಜೀವನ ಜಗತ್ತಿನಲ್ಲಿ ಹಲವು ಜನರಿಗೆ ಸ್ಪೂರ್ತಿಯನ್ನು ಹೋರಾಟದ ಮನೋಭಾವನೆಯನ್ನು ಉಂಟು ಮಾಡಿದೆ. ನಿಷ್ಕಲ್ಮಶ ವ್ಯಕ್ತಿತ್ವ, ದೇಶಕ್ಕಾಗಿ ಬದುಕಿದ ಸರಳ ವ್ಯಕ್ತಿ ಗಾಂಧೀಜಿಯವರು .ಆದರೆ ಅವರ ಚಿಂತನೆಗಳು ಇಂದು ಮೂರನೇ ದರ್ಜೆಯ ರೀತಿಯಲ್ಲಿ ಕಾಣುತ್ತಿರುವುದು ಬೇಸರವನ್ನುಂಟು ಮಾಡಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಹಾಗೂ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತರು ಆದ ಸುರೇಶ್ ಎನ್ ಋಗ್ವೇದಿ ಗಾಂಧೀಜಿ ಭಾರತದ ಶತಮಾನದ ಪುರುಷರಾಗಿ ವಿಶ್ವಕ್ಕೆ ಅಹಿಂಸಾ ತತ್ವದ ಮೂಲಕ ಭಾರತೀಯ ಶ್ರೇಷ್ಠ ತತ್ವವನ್ನು ಜಗತ್ತಿಗೆ ನೀಡಿದವರು. ಗಾಂಧೀಜಿಯೊಂದಿಗೆ ಅನೇಕ ಮಹಾನ್ ವ್ಯಕ್ತಿಗಳ ಜನನಕ್ಕೆ ಕಾರಣವಾಗಿರುವ ಭಾರತಾಂಬೆ ವಿಶ್ವಕ್ಕೆ ಮಹಾನ್ ತತ್ವಗಳನ್ನೇ ಅರ್ಪಿಸಿದೆ. ಮಹಾತ್ಮರುಗಳನ್ನು, ದೇಶ ಶ್ರೇಷ್ಠರನ್ನು ಜಾತಿ, ಮತ, ಪಂಥದ ಮೂಲಕ ಕಾಣುವ ಮಾನಸಿಕತೆ ಆತ್ಮ ದ್ರೋಹವೆಂದರು. ಓ ಆರ್ ಪ್ರಕಾಶ್ ರವರು ನಾವು ಕಂಡೂ ಕಾಣದ ಗಾಂಧಿ ಪುಸ್ತಕದಲ್ಲಿ ಗಾಂಧೀಜಿಯವರ ವಕೀಲತೆ , ಶ್ರೇಷ್ಠ ಪತ್ರಕರ್ತ ರಾಗಿ ನೀಡಿರುವ ಕೊಡುಗೆ ಮರೆಯಲಾಗದು. ಗಾಂಧೀಜಿ ಅಪರೂಪದ ವ್ಯಕ್ತಿತ್ವ ಹೊಂದಿದವರು .ಅವರ ಜೀವನ ಮತ್ತು ಇತಿಹಾಸದ ಅಧ್ಯಯನದ ಕೊರತೆಯಿಂದ ಗಾಂಧೀಜಿಯವರ ಸಾರ್ವತ್ರಿಕ ದೃಷ್ಟಿಕೋನ ಬದಲಾಗಿರುವುದು ಆಶ್ಚರ್ಯವನ್ನುಂಟು ಮಾಡಿದೆ ಎಂದರು.
ಸಮಾರಂಭದಲ್ಲಿ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳಾದ ನಾಗೇಂದ್ರ ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರುಗಳಾದ ಕಲೆ ನಟರಾಜು ರವಿಚಂದ್ರಪ್ರಸಾದ್ ಆರ್ ವಿ ಮಹದೇವಪ್ಪ , ಆರ್.ಮೂರ್ತಿ ಬಿಸಲ್ವಾಡಿ,ಬಿಕೆ ಆರಾಧ್ಯ, ಸರಸ್ವತಿ , ಸುರೇಶ್ ನಾಗ್, ಜನಪದ ಮಹೇಶ್ ಇದ್ದರು
