ಮಂಗಳೂರು (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಗಣೇಶ ಚತುರ್ಥಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಗಣೇಶ ಚತುರ್ಥಿ ಹಬ್ಬವನ್ನು ವಿಭಿನ್ನವಾಗಿ ಆಚರಿಸಲಾಯ್ತು. ಇತರೆಡೆಗಳಂತೆ ಮನೆ ಮನೆಯಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಕ್ರಮ ಇಲ್ಲ. ಇಲ್ಲಿ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜೆ ನಡೆದರೆ ಕೆಲವೇ ಮನೆಗಳಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಗಣೇಶ ಚತುರ್ಥಿ ಪ್ರಯುಕ್ತ ಕೆಲವೊಂದು ಪ್ರದೇಶಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ನಡೆಯುತ್ತದೆ. ಇದರಲ್ಲಿ ಮಂಗಳೂರಿನ ನೆಹರು ಮೈದಾನದಲ್ಲಿ, ಸಂಘನಿಕೇತನದಲ್ಲಿ, ಬಂಟರ ಯಾನೆ ನಾಡವರ ಮಾತೃ ಸಂಘದಿಂದ ಬಂಟರ ಭವನದಲ್ಲಿ, ಫರಂಗಿಪೇಟೆ, ಜೆಪ್ಪಿನಮೊಗರು ಸೇರಿದಂತೆ ಹಲವೆಡೆ ಸಾರ್ವಜನಿಕ ಗಣೇಶೋತ್ಸವ ನಡೆಯಿತು. ಇಲ್ಲಿ ನಡೆಯುವ ಸಾರ್ವಜನಿಕ ಗಣೇಶೋತ್ಸವ ಪ್ರಯುಕ್ತ ಕೆಲವೆಡೆ ನಿನ್ನೆ ಸಂಜೆಯ ವೇಳೆಗೆ, ಕೆಲವೆಡೆ ಇಂದು ಮುಂಜಾನೆ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಇಂದು ಮುಂಜಾನೆಯಿಂದಲೇ ಪೂಜೆ ಪುನಸ್ಕಾರ ನಡೆಯಿತು. ಕೆಲವೆಡೆ ಇಂದು ರಾತ್ರಿ, ಕೆಲವೆಡೆ ಮೂರನೇ ದಿನಕ್ಕೆ ಗಣೇಶ ಮೂರ್ತಿಯ ನಿಮಜ್ಜನ ಮಾಡಲಾಗುತ್ತದೆ.
ಇನ್ನು ಸಾರ್ವಜನಿಕರು ಗಣೇಶ ಚತುರ್ಥಿ ಪ್ರಯುಕ್ತ ಸಾರ್ವಜನಿಕ ಗಣೇಶೋತ್ಸವಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಮನೆಯಲ್ಲಿ ದೇವರ ಫೋಟೋಗಳನ್ನು ಹೂವುಗಳಿಂದ ಸಿಂಗರಿಸಿ ಕಬ್ಬನ್ನು ಕಟ್ಟಿ ಹಬ್ಬದಡುಗೆ ಮಾಡಿ ಸಂಭ್ರಮಿಸುತ್ತಾರೆ. ಗಣೇಶ ಚತುರ್ಥಿಗೆ ಕೆಲವೆಡೆ ತೆನೆ ಹಬ್ಬ ಆಚರಿಸುತ್ತಾರೆ. ಈ ಋತುವಿನ ಹೊಸ ತೆನೆಯಲ್ಲಿ ಊಟ ಮಾಡುವ ಈ ಹಬ್ಬವನ್ನು ಆಚರಿಸಲು ಪುದ್ದರ್ ಎಂಬ ಹಬ್ಬ ಇದ್ದರೂ ಹೆಚ್ಚಿನವರು ಗಣೇಶ ಚತುರ್ಥಿ ದಿನವೇ ತೆನೆಹಬ್ಬ ಆಚರಿಸುತ್ತಾರೆ. ಸಾರ್ವಜನಿಕ ಗಣೇಶೋತ್ಸವ ನಡೆಯುವ ಸ್ಥಳದಲ್ಲಿ ಮತ್ತು ದೇವಸ್ಥಾನಗಳಲ್ಲಿ ಭಕ್ತರಿಗೆ ತೆನೆಯನ್ನು ವಿತರಿಸಲಾಗುತ್ತದೆ.
