Monday, April 21, 2025
Google search engine

Homeರಾಜ್ಯಸುದ್ದಿಜಾಲಗಣೇಶೋತ್ಸವ : ಸುರಕ್ಷತಾ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ:ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್

ಗಣೇಶೋತ್ಸವ : ಸುರಕ್ಷತಾ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ:ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್

ಚಾಮರಾಜನಗರ: ಗೌರಿ ಗಣೇಶೋತ್ಸವ ಆಯೋಜನೆ, ವಿಸರ್ಜನೆ, ಉತ್ಸವ ಕಾರ್ಯಗಳ ಸುಗಮ ನಿರ್ವಹಣೆಗಾಗಿ ಆಯೋಜಕರು ಸಕಲ ಸುರಕ್ಷತಾ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಮೂಲಕ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಅವರು ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಗೌರಿ ಗಣೇಶೋತ್ಸವ, ವಿಸರ್ಜನೆ ಸಂಬಂಧ ಜಿಲ್ಲೆಯ ಗಣೇಶ ಮೂರ್ತಿ ಪ್ರತಿಷ್ಠಾಪನೆ ಸಂಘ ಸಂಸ್ಥೆಯ ಪದಾಧಿಕಾರಿಗಳು, ಮುಖಂಡರು ಹಾಗೂ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾರ್ವಜನಿಕ ಸ್ಥಳಗಳಲ್ಲಿ ಗೌರಿ ಗಣೇಶ ಪ್ರತಿಷ್ಠಾಪನೆ, ವಿವಿಧ ಕಾರ್ಯಕ್ರಮಗಳ ಆಯೋಜನೆ, ವಿಸರ್ಜನಾ ಮೆರವಣಿಗೆ ಕಾರ್ಯಗಳಿಗೆ ಪರವಾನಗಿ ನೀಡಲು ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ವಿವಿಧ ಅಧಿಕಾರಿಗಳನ್ನೊಳಗೊಂಡ ಏಕಗವಾಕ್ಷಿ ಸಮಿತಿ ಕಾರ್ಯನಿರ್ವಹಿಸುತ್ತಿದೆ. ಈ ಸಮಿತಿಗೆ ಆಯೋಜಕರು ಅರ್ಜಿ ಸಲ್ಲಿಸಿ ಅನುಮತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪಿಸುವವರು ಯಾವುದೇ ಅವಘಡಕ್ಕೆ ಆಸ್ಪದವಾಗದಂತೆ ಮುನ್ನೆಚ್ಚರಿಕೆ ಹಾಗೂ ಸುರಕ್ಷತಾ ಕ್ರಮಗಳನ್ನು ಖಾತರಿಗೊಳಿಸಬೇಕು. ವಿದ್ಯುತ್ ಸಂಪರ್ಕ, ದೀಪಾಲಂಕಾರ ಸಂದರ್ಭದಲ್ಲಿ ಸುರಕ್ಷಿತ ಕ್ರಮಗಳನ್ನು ಅನುಸರಿಸಬೇಕು. ಏಕಗವಾಕ್ಷಿ ಸಮಿತಿಯಲ್ಲಿ ಇರುವ ವಿದ್ಯುತ್ ಸರಬರಾಜು ನಿಗಮದ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ನಿಗದಿಪಡಿಸಿರುವ ಸ್ಥಳಗಳಲ್ಲಿ ಮಾತ್ರ ಗಣೇಶ ವಿಸರ್ಜನೆ ಮಾಡಬೇಕು. ವಿಸರ್ಜನೆ ಸಂದರ್ಭದಲ್ಲಿಯೂ ಸುರಕ್ಷತಾ ಕ್ರಮಗಳನ್ನು ಪಾಲನೆ ಮಾಡಬೇಕು. ಸ್ಥಳೀಯ ಆಡಳಿತ, ಪೊಲೀಸ್ ಅಧಿಕಾರಿಗಳಿಗೆ ಮುಂಚಿತವಾಗಿಯೇ ಮಾಹಿತಿ ನೀಡಬೇಕು. ಏಕಗವಾಕ್ಷಿ ಸಮಿತಿಯ ಗಮನಕ್ಕೂ ತರಬೇಕು. ಸಮಿತಿಯಲ್ಲಿರುವ ಅಧಿಕಾರಿಗಳು ಗಣೇಶ ಉತ್ಸವ ಸಂಬಂಧ ಆಯೋಜಕರಿಗೆ ಸೂಕ್ತ ಮಾರ್ಗದರ್ಶನಗಳನ್ನು ಮಾಡಬೇಕು ಎಂದರು.

ಪರಿಸರ ಸ್ನೇಹಿಯಾಗಿ ಗಣೇಶ ಚತುರ್ಥಿಯನ್ನು ಆಚರಿಸಬೇಕು. ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ), ಬಣ್ಣ ಲೇಪಿತ ಮೂರ್ತಿಗಳನ್ನು ನೀರಿನಲ್ಲಿ ವಿಸರ್ಜಿಸುವುದರಿಂದ ನೈಸರ್ಗಿಕ ಜಲ ಮೂಲಗಳು ಕಲುಷಿತಗೊಂಡು ಪ್ರಾಣಿ, ಪಕ್ಷಿ ಜಲಚರಗಳ ಜೀವಕ್ಕೆ ಅಪಾಯವಾಗುತ್ತದೆ. ಹೀಗಾಗಿ ಬಣ್ಣ ರಹಿತ ಮಣ್ಣಿನ ನೈಸರ್ಗಿಕ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು. ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬಾರದು. ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಅಲಂಕಾರಿಕ ವಸ್ತುಗಳು, ಹೂ, ಹಣ್ಣು ಇನ್ನಿತರ ಪದಾರ್ಥಗಳನ್ನು ಪ್ರತ್ಯೇಕಿಸಬೇಕು ಎಂದು ಜಿಲ್ಲಾಧಿಕಾರಿಯವರು ಮನವಿ ಮಾಡಿದರು.

ಗೌರಿ ಗಣೇಶ ಹಬ್ಬ ಸಂಭ್ರಮದಿಂದ ಆಚರಿಸುವಂತದ್ದಾಗಿದೆ. ಜಿಲ್ಲೆಯ ಜನತೆ ಈ ಸಂದರ್ಭದಲ್ಲಿ ಪರಿಸರ ಪೂರಕ ಕ್ರಮಗಳನ್ನು ಅನುಸರಿಸಬೇಕು. ಅನುಮತಿ ಪರವಾನಗಿ ಪಡೆದು ಗಣೇಶೋತ್ಸವ ಆಯೋಜಿಸಬೇಕು. ಜಿಲ್ಲಾಡಳಿತ ಇದಕ್ಕೆ ಎಲ್ಲಾ ಸಹಕಾರ ನೀಡಲಿದೆ. ಜಿಲ್ಲಾ ಜನತೆಯು ಈ ನಿಟ್ಟಿನಲ್ಲಿ ಕೈಜೋಡಿಸಬೇಕೆಂದು ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಅವರು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಅವರು ಮಾತನಾಡಿ ಗಣೇಶ ಪ್ರತಿಷ್ಠಾಪನೆ, ಉತ್ಸವ ಸಂದರ್ಭದಲ್ಲಿ ಧ್ವನಿವರ್ಧಕ ಬಳಕೆಗೆ ಅನುಮತಿ ಅಗತ್ಯ. ನಿಗದಿ ಅವಧಿಯೊಳಗೆ ಮಾತ್ರ ಧ್ವನಿವರ್ಧಕ ಬಳಸಬೇಕು. ಗಣಪತಿ ವಿಸರ್ಜನಾ ಮೆರವಣಿಗೆಗೆ ಮೊದಲು ಮಾಹಿತಿ ನೀಡಬೇಕು. ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಸ್ಥಳಗಳಲ್ಲಿ ಆಯೋಜಕರೂ ಸಹ ಅವರ ಸ್ವಯಂ ಸೇವಕರನ್ನು ಸುರಕ್ಷತೆಗಾಗಿ ನಿಯೋಜಿಸಿಕೊಳ್ಳಬೇಕು ಎಂದರು.

ಇದೇ ವೇಳೆ ಜಿಲ್ಲಾ ಅಗ್ನಿಶಾಮಕ ದಳ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ, ಪರಿಸರ ಅಧಿಕಾರಿಗಳು ಗಣೇಶ ಹಬ್ಬದ ಸಂದರ್ಭದಲ್ಲಿ ಅನುಸರಿಸಬೇಕಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿವರಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಉಪವಿಭಾಗಾಧಿಕಾರಿ ಮಹೇಶ್, ಡಿವೈಎಸ್‍ಪಿ ಲಕ್ಷ್ಮಯ್ಯ, ಸೋಮಣ್ಣಗೌಡ, ತಹಶೀಲ್ದಾರರು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿಗಳು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಆಯುಕ್ತರು, ಮುಖ್ಯಾಧಿಕಾರಿಗಳು, ಇತರೆ ಇಲಾಖೆಗಳ ಅಧಿಕಾರಿಗಳು, ಜಿಲ್ಲೆಯ ಗಣೇಶ ಮೂರ್ತಿ ಪ್ರತಿಷ್ಠಾಪನೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಇತರೆ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular