ಗುವಾಹಟಿ: ಅಸ್ಸಾಂನ ಗುವಾಹಟಿಯ ದೇವಸ್ಥಾನದ ಆವರಣದಲ್ಲಿ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ವಿಡಿಯೊ ಸ್ಥಳೀಯರಲ್ಲಿ ಹರಿದಾಡುತ್ತಿರುವುದು ಕಂಡು ಬಂದ ಬಳಿಕ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. `ಘಟನೆ ಮತ್ತು ವಿಡಿಯೊ ಕುರಿತು ಮಾಹಿತಿ ಪಡೆದ ಬಳಿಕ ಗೋರ್ಚುಕ್ ಮತ್ತು ಜಲುಕ್ಬರಿ ಪೊಲೀಸ್ ಠಾಣೆಗಳ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ಪೊಲೀಸರ ತಂಡ ಶೋಧ ನಡೆಸಿತು. ವಿಡಿಯೊದಲ್ಲಿ ಗುರುತಿಸಲಾದ ಏಳು ಜನರನ್ನು ಬಂಧಿಸಲಾಯಿತು’ ಎಂದು ಗುವಾಹಟಿಯ ಪೊಲೀಸ್ ಆಯುಕ್ತ ದಿಗಂಬ ಬರಾಹ್ ತಿಳಿಸಿದ್ದಾರೆ.
ಬಂಧಿತ ಆರೋಪಿಗಳೆಲ್ಲರೂ ೧೮ ರಿಂದ ೨೩ ವರ್ಷದೊಳಗಿನವರಾಗಿದ್ದಾರೆ. ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ, ಪ್ರಕರಣ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ನವೆಂಬರ್ ೧೭ರಂದು ಹಬ್ಬವನ್ನು ಆಚರಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಒಬ್ಬ ಆರೋಪಿ ಮಹಿಳೆಯನ್ನು ಗುಡ್ಡಗಾಡು ಪ್ರದೇಶದಲ್ಲಿರುವ ದೇವಾಲಯದ ಆವರಣಕ್ಕೆ ಕರೆದೊಯ್ದಿದ್ದರು. ಅಲ್ಲಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದು, ಕೃತ್ಯದ ವಿಡಿಯೊವನ್ನು ಚಿತ್ರೀಕರಿಸಿದ್ದಾರೆ. ವಿಡಿಯೊದಲ್ಲಿ ಒಟ್ಟು ಒಂಬತ್ತು ಜನರನ್ನು ಗುರುತಿಸಲಾಗಿದೆ. ಅವರಲ್ಲಿ ಇಬ್ಬರು ತಲೆಮರೆಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.