ಚೆನ್ನೈ: ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಬೇಕಾದ ಶಾಲೆಯ ಶಿಕ್ಷಕರೇ ನೀಚ ಕೃತ್ಯವೆಸಗಿ ಜೈಲು ಕಂಬಿ ಎಣಿಸುತ್ತಿರುವ ಘಟನೆಯೊಂದು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದಿದೆ.
ಪ್ರೌಢ ಶಾಲೆಯ ಮೂವರು ಶಿಕ್ಷಕರಿಂದಲೇ ವಿದ್ಯಾರ್ಥಿನಿಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನಡೆದಿದ್ದು ಘಟನೆಗೆ ಸಂಬಂಧಿಸಿ ಸಂತ್ರಸ್ಥೆಯ ಕುಟುಂಬ ಸದಸ್ಯರು ಹಾಗೂ ಸಾರ್ವಜನಿಕರಿಂದ ಭಾರಿ ಆಕ್ರೋಶ ವ್ಯಕ್ತವಾಗಿದ್ದು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಅವರ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಾಲಕಿ ಒಂದು ತಿಂಗಳಿಂದ ಶಾಲೆಗೆ ಗೈರಾಗಿದ್ದು ಈ ಕುರಿತು ಶಾಲೆಯ ಪ್ರಾಂಶುಪಾಲರು ವಿಚಾರಿಸಿದ ವೇಳೆ ಬಾಲಕಿಯ ತಾಯಿ ತನ್ನ ಮಗಳ ಮೇಲೆ ನಡೆದಿರುವ ದೌರ್ಜನ್ಯವನ್ನು ವಿವರಿಸಿದ್ದಾರೆ ಇದರಿಂದ ಆಘಾತಕ್ಕೆ ಒಳಗಾದ ಪ್ರಾಂಶುಪಾಲರು ಕೂಡಲೇ ಪೊಲೀಸ್ ದೂರು ದಾಖಲಿಸಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ವರದಿ ನೀಡುವಂತೆ ಸೂಚಿಸಿದರು. ಬಳಿಕ ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಮೂವರು ಶಿಕ್ಷಕರನ್ನು ಬಂಧಿಸಿದ್ದು ಸದ್ಯ ಮೂವರು ಪೊಲೀಸ್ ಕಸ್ಟಡಿಯಲ್ಲಿದ್ದಾರೆ ಅಲ್ಲದೆ ಸಂತ್ರಸ್ತ ಬಾಲಕಿಯನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.