ಪುತ್ತೂರು: ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಇಂದು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸವಣೂರಿನ ಆರೇಲ್ತಡಿ ದೈವಸ್ಥಾನಕ್ಕೆ ಭೇಟಿ ನೀಡಿದರು. ಇದು ಆರೇಲ್ತಡಿ ಇರ್ವೆರ್ ಉಳ್ಳಾಕ್ಲು, ಕೆಡೆಂಜೋಡಿತ್ತಾಯಿ ಹಾಗೂ ಪರಿವಾರ ದೈವಸ್ಥಾನವಾಗಿದೆ. ಕಳೆದ ಮೇ 13ರಂದು ದೈವಸ್ಥಾನದ ಬ್ರಹಕಲಶೋತ್ಸವಕ್ಕೆ ರೆಡ್ಡಿ ಆಗಮಿಸಬೇಕಿತ್ತು. ಆದ್ರೆ ಆಂಧ್ರಪ್ರದೇಶದ ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮೇ 6ರಂದು ಮತ್ತೆ ಕಾನೂನಿನ ಕುಣಿಕೆಗೆ ಸಿಲುಕಿದ್ದ ಪರಿಣಾಮ ದೈವಸ್ಥಾನದ ಬ್ರಹ್ಮಕಲಶೋತ್ಸವ ಆಗಮಿಸಿರಲಿಲ್ಲ. ಹೀಗಾಗಿ ಮೇ 13ರಂದು ದೈವಸ್ಥಾನದ ಬ್ರಹ್ಮಕಲಶೋತ್ಸವ ಸಮಾರಂಭದಲ್ಲಿ ದೈವದ ಬಳಿ ಜನಾರ್ದನ ರೆಡ್ಡಿ ಆಪ್ತರು ಜೈಲಿನಿಂದ ಬಿಡುಗಡೆಗೆ ಮೊರೆ ಇಟ್ಟಿದ್ದರು.
ಇಂದಿನಿಂದ 1 ತಿಂಗಳ ಒಳಗಡೆ ಜೈಲಿನಿಂದ ಬಿಡುಗಡೆ ಆಗುತ್ತಾರೆ ಎಂದು ದೈವ ನುಡಿ ನೀಡಿತ್ತು. ಗ್ರಾಮದ ದೈವ ಕೆಡೆಂಜೋಡಿತ್ತಾಯಿ ದೈವ ರೆಡ್ಡಿಗೆ ಜೈಲಿನಿಂದ ಬಿಡುಗಡೆಯಾಗುವ ಅಭಯ ನೀಡಿತ್ತು. ದೈವದ ಅಭಯದಂತೆ ಒಂದು ತಿಂಗಳ ಒಳಗೆ ಗಾಲಿ ಜನಾರ್ದನ ರೆಡ್ಡಿ ಅವರು ಬಿಡುಗಡೆಯಾಗಿದ್ದರು. ಹಾಗಾಗಿ ಇಂದು ಸವಣೂರಿನಲ್ಲಿರುವ ಇರುವೆರ್ ಉಳ್ಳಾಕುಲು ಮತ್ತು ಕೆಡೆಂಜೋಡಿತ್ತಾಯಿ ಆರೇಲ್ತಡಿ ದೈವಸ್ಥಾನಕ್ಕೆ ಬಿಡುಗಡೆಯ ಒಂದುವರೆ ತಿಂಗಳ ಬಳಿಕ ದೈವಸ್ಥಾನಕ್ಕೆ ಭೇಟಿ ನೀಡಿ ತಂಬಿಲ ಸೇವೆ ನೀಡಿದರು. ಸಂಕ್ರಮಣದ ವಿಶೇಷ ದಿನದಂದು ದೈವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಇದೇ ವೇಳೆ ತುಳುನಾಡಿನ ದೈವದ ನುಡಿಗೆ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ತಲೆಬಾಗಿದ್ದಾರೆ.
ಜನಾರ್ದನ ರೆಡ್ಡಿಗೆ ಜೊತೆಗೆ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಉಪಸ್ಥಿತರಿದ್ದರು.