ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರಿನ ಗಂಜಿಮಠ ಗ್ರಾಮ ಪಂಚಾಯತ್ ನ ನೂತನ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷೆ ಮಾಲತಿ ಎಂ ಇತ್ತೀಚಿಗೆ ಮಾಜಿ ಶಾಸಕ ಮೊಯ್ದೀನ್ ಬಾವಾ ಅವರ ಬಗ್ಗೆ ನೀಡಿರುವ ಹೇಳಿಕೆ ಬಹಳ ಬೇಸರ ತರಿಸಿದೆ ಎಂದು ಮಾಜಿ ಗ್ರಾಮ ಪಂಚಾಯತ್ ಸದಸ್ಯ ಜಿ.ಎಂ.ಇಮ್ತಿಯಾಜ್ ತಿಳಿಸಿದ್ದಾರೆ.
ಅವರು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪ್ರೆಸ್ ಮೀಟ್ ನಲ್ಲಿ ಮಾತನಾಡಿದರು. ಈ ಪಂಚಾಯತ್ ನಲ್ಲಿ ಒಟ್ಟು ಸದಸ್ಯರು 31 ಇದ್ದು, ಇದರಲ್ಲಿ ಒಬ್ಬರು ಮರಣ ಹೊಂದಿದ್ದಾರೆ. ಸದ್ರಿ 30 ಸದಸ್ಯರಿದ್ದು, ಇದರಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು 18, ಕಾಂಗ್ರೆಸ್ ಬೆಂಬಲಿತ ಸದಸ್ಯರು 7, ಜೆಡಿಎಸ್ ಬೆಂಬಲಿತ ಸದಸ್ಯರು 2, ಪಕ್ಷೇತರ ಸದಸ್ಯರು 3 ಇದ್ದಾರೆ. 17-08- 2023ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷರಾಗಿ ಮಾಲತಿ ಎಂ ಆಯ್ಕೆಯಾಗಿದ್ದಾರೆ.
ಈ ಚುನಾವಣೆಯಲ್ಲಿ ಮಾಜಿ ಶಾಸಕರಾದ ಮೊಯ್ದೀನ್ ಬಾವಾ ಅವರು ತಮ್ಮ 2 ಆಪ್ತರಾದ ಬಾಜಿ ಜಹೂರ್ ಮತ್ತು ಆರ್.ಎಸ್. ಇರ್ಫಾನ್ ರವರಿಗೆ ತಮ್ಮ ಮತವನ್ನು ಮಾಲತಿ ಎಂ.ರವರಿಗೆ ನೀಡಬೇಕೆಂದು ಗುರುಪುರ ಪಂಚಾಯತಿನ ಉಪಾಧ್ಯಕ್ಷರಾದ ದಾವುದ್ ಬಂಗ್ಲೆಗುಡ್ಡೆ ಮುಖಾಂತರ ಆದೇಶ ಮತ್ತು ಮನವರಿಕೆಯನ್ನು ಮಾಡಿ ಮಹತ್ವದ ಪಾತ್ರವನ್ನು ವಹಿಸಿದ್ದರು. ಆದರೆ ಚುನಾವಣೆ ಆದ ನಂತರ ಅಧ್ಯಕ್ಷರಾದ ಮಾಲತಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕರಾದ ಮೊಯ್ದೀನ್ ಬಾವಾರ ಪಾತ್ರ ಏನೂ ಇಲ್ಲ ಎಂದು ಹೇಳಿದ್ದಾರೆ. ಅವರ ಈ ವರ್ತನೆಯಿಂದ ನಮಗೆ ಬೇಸರವಾಗಿದೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆರ್.ಎಸ್. ಇರ್ಫಾನ್ ಮತ್ತು ಬಾಜಿ ಜಹೂರ್ ಉಪಸ್ಥಿತರಿದ್ದರು.