ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಗ್ರಾಮದಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಲಾಲ್‌ಬಹದ್ದೂರ್ ಶಾಸ್ತ್ರಿ ಆಣೆಕಟ್ಟಿನ ಹಿನ್ನೀರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಸೆ.೦೨) ಗಂಗಾ ಪೂಜೆ ನರೆವೇರಿಸಿ, ಬಾಗಿನ ಅಪರ್ಪಿಸಿದರು. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಇಂದು ನಾನು, ನೀರಾವರಿ ಸಚಿವ ಡಿಕೆ ಶಿವಕುಮಾರ್ ಹಾಗೂ ಇತರ ಸಚಿವರು, ಸಂಸದರು ಮತ್ತು ಶಾಸಕರು ಕೃಷ್ಣೆಗೆ ಗಂಗಾಪೂಜೆ ನೆರವೇರಿಸಿ, ಬಾಗಿನ ಅರ್ಪಣೆ ಮಾಡಿದ್ದೇವೆ. ಡ್ಯಾಂ ೫೧೯.೬೦ ಮೀಟರ್ ಇದ್ದು, ೫೧೯.೫೫ ಮೀಟರ್ ನೀರು ಸಂಗ್ರಹವಿದೆ ಎಂದರು.
ರಾಜ್ಯದಲ್ಲಿ ಮಳೆ ವಾಡಿಕೆಗಿಂತ ಕಡಿಮೆಯಾಗಿದೆ. ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ರಾಜ್ಯದ ಬರ ಕುರಿತು ಚರ್ಚೆ ಮಾಡಲಾಗಿದೆ. ಜಂಟಿ ಸರ್ವೆ ಮಾಡಲಾಗಿದೆ. ೧೧೩ ತಾಲೂಗಳಲ್ಲಿ ಬರವಿದೆ. ಈ ಬಗ್ಗೆ ಸ. ೪ ರಂದು ಸಭೆ ನಡೆಯಲಿದೆ. ಸಭೆ ಬಳಿಕ ಎಷ್ಟು ತಾಲೂಕುಗಳಲ್ಲಿ ಬರ ಇದೆ ಎಂದು ಘೋಷಣೆ ಮಾಡಲಾಗುತ್ತದೆ ಎಂದು ಹೇಳಿದರು.
ಬರ ವಿಚರಾದಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಕೆ ಮಾಡಿದ್ದೇನೆ. ಎನ್‌ಡಿಆರ್‌ಎಫ್ ನಿಮಯದ ಪ್ರಕಾರ ಬರ ಪರಿಹಾರ ಸಿಗಲಿದೆ. ಎನ್‌ಡಿಆರ್‌ಎಫ್ ನಿಯಮ ಬದಲಾವಣೆಗೆ ಕೇಂದ್ರಕ್ಕೆ ಪತ್ರ ಬರೆದಿದ್ದೇನೆ. ನೀರಾವರಿಗಾಗಿ ಬಜೆಟ್‌ನಲ್ಲಿ ೨೧೦೦೦ ಕೋಟಿ ರೂ. ಮೀಸಲು ಇಡಲಾಗಿದೆ. ಭದ್ರಾ ಯೋಜನೆಗೆ ೫೩೦೦ ಕೋಟಿ ರೂ. ಕೇಂದ್ರದಿಂದ ಬರಬೇಕು. ಆದರೆ ಕೇಂದ್ರ ಸರ್ಕಾರ ಈವರೆಗೂ ಹಣ ನೀಡಿಲ್ಲ. ಯುಕೆಪಿಗೆ ೧೨೦೦ ಕೋಟಿ ಮಾತ್ರ ಇಡಲಾಗಿದೆ. ಇನ್ನೂ ಹೆಚ್ಚಿನ ಮೊತ್ತ ನೀಡಲಾಗುತ್ತದೆ ಎಂದು ತಿಳಿಸಿದರು.
ಕಾವೇರಿ ವಿಚಾರದಲ್ಲಿ ಯಾರೂ ಆತಂಕ ಪಡಬೇಕಿಲ್ಲ. ಮೊದಲು ಕುಡಿಯುವ ನೀರಿಗೆ ಆದ್ಯತೆ ಕೊಡಬೇಕಿದೆ. ಅದನ್ನು ನಮ್ಮ ಅಧಿಕಾರಿಗಳ ತಂಡ, ತಾಂತ್ರಿಕ ತಂಡ ನಿರ್ವಹಿಸಲಿದೆ. ಕಂದಾಯ ಸಚಿವರು, ಶಾಸಕರ ಸಭೆ ಕರೆಯಲಾಗಿದೆ. ಸ್ಥಳಿಯ ಸಮಸ್ಯೆಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಕೃಷ್ಣಾ ನದಿಗೆ ಗಂಗಾಪೂಜೆ ಹಾಗೂ ಬಾಗಿನ ಅರ್ಪಣೆಯ ಬಳಿಕ ಅಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಇತರ ಸಚಿವರು ಕೃಷ್ಣ ಮೇಲ್ದಂಡೆ ಯೋಜನೆ ೩ರ ಭೂಸ್ವಾಧೀನ, ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಕುರಿತು ಸಭೆ ನಡೆಸಿದರು. ಕೆಬಿಜೆಎನ್‌ಎಲ್ ಎಂಡಿ ಶಿವಕುಮಾರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಭಾಗಿಯಾಗಿದ್ದರು.