ನ್ಯೂಜೆರ್ಸಿ: ಅನಿವಾಸಿ ಭಾರತೀಯರು ಒಬ್ಬರು ಅಮೇರಿಕಾದಲ್ಲಿ ಇಂಟರ್‍ಸಿಟಿ ಬಸ್ ಸೇವೆಯನ್ನು ಆರಂಭಿಸಿ ಅದಕ್ಕೆ ಗೌಡ್ರು ಎಕ್ಸ್‌ಪ್ರೆಸ್ ಎಂದು ಹೆಸರಿಟ್ಟಿದ್ದಾರೆ. ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಹೆಸರು ಈಗ ಅಮೇರಿಕಾದಲ್ಲೂ ರಾರಾಜಿಸುತ್ತಿದೆ. ಡಾ. ಸಿರ್ಸಿ ಗೌಡ ಅವರು ಆಯೋಜಿಸಿರುವ ಎಕ್ಸ್‍ಪ್ರೆಸ್ ಬಸ್ ಸೇವೆ ಅಮೇರಿಕಾದ ನ್ಯೂಜೆರ್ಸಿಯಿಂದ ಡೆಟ್ರಾಯಿಟ್‍ಗೆ ಪ್ರಯಾಣ ಬೆಳೆಸುತ್ತಿದ್ದು, ಇದಕ್ಕೆ 200 ಡಾಲರ್ ಪ್ರಯಾಣ ದರವನ್ನು ನಿಗದಿಪಡಿಸಿ ಅವರಿಗೆ ರುಚಿಕರ ಬಿರಿಯಾನಿ ಜೊತೆಗೆ ಮದ್ಯದ ವ್ಯವಸ್ಥೆಯನ್ನು ಕೂಡ ಕಲ್ಪಿಸಲಾಗುತ್ತಿದೆ.
ಇತ್ತೀಚೆಗೆ ಡೆಟ್ರಾಯಿಟ್‍ನಲ್ಲಿ ನಡೆದ ಅಮೇರಿಕಾ ಒಕ್ಕಲಿಗರ ಪರಿಷತ್ತಿನ 16ನೇ ವಾರ್ಷಿಕ ಸಮ್ಮೇಳನದಲ್ಲಿ ಅಮೇರಿಕಾದಲ್ಲಿ ನೆಲೆಸಿರುವ ಒಕ್ಕಲಿಗ ಸಮುದಾಯದ ಕನ್ನಡಿಗರು ಇದರ ಸೇವೆಯನ್ನು ಪಡೆಯಲು ವಿಶೇಷ ವ್ಯವಸ್ಥೆಯನ್ನು ಮಾಡಲಾಗಿತ್ತು. ಬೋಂಡ ಬಿರಿಯಾನಿ ಭಾವಗೀತೆ ಹೆಸರಿನ ಔತಣ ಎಲ್ಲರನ್ನು ಖುಷಿಗೊಳಿಸಿತ್ತು.
ನ್ಯೂಜೆರ್ಸಿ, ಕ್ಯಾಲಿಫೋರ್ನಿಯಾ, ಇಂಡಿಯಾನ, ಡೆಟ್ರಾಯಿಟ್ ನಲ್ಲಿ ಅನೇಕ ಭಾರತೀಯ ಮೂಲದವರು ವಾಸಿಸುತ್ತಿದ್ದು, ಈ ಬಸ್ ಸೇವೆ ಅವರಿಗೆ ತಮ್ಮ ಸ್ನೇಹಿತರನ್ನು ಭೇಟಿ ಮಾಡಲು ಅನುಕೂಲವಾಗಿದೆ ಎಂದು ಖುಷಿ ವ್ಯಕ್ತವಾಗಿದೆ.ಬೆಳಿಗ್ಗೆ 9 ಗಂಟೆಗೆ ಹೊರಡುವ ಬಸ್ ಸಂಜೆ 6 ಗಂಟೆಗೆ ನ್ಯೂಜೆರ್ಸಿ ತಲುಪಲಿದ್ದು, ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ ಸೇರಿದಂತೆ ಹಲವು ಸವಲತ್ತುಗಳು ಪ್ರಯಾಣಿಕರಿಗೆ ಸಿಗುತ್ತಿದೆ. ಈಗಾಗಲೇ ಈ ಬಸ್ ಸೇವೆ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ. ಅದರಲ್ಲೂ ಒಕ್ಕಲಿಗ ಸಮುದಾಯದವರು ಖುಷಿಪಟ್ಟು ಯಶಸ್ವಿಗೆ ಹಾರೈಸಿದ್ದಾರೆ.