Sunday, April 20, 2025
Google search engine

Homeಸ್ಥಳೀಯಗೌರಿ-ಗಣೇಶ ಹಬ್ಬ ಆಚರಣೆ; ನಿಯಮ ಪಾಲಿಸಿ, ಜಿಲ್ಲಾಡಳಿತ ಜತೆ ಸಹಕರಿಸಲು ಮನವಿ

ಗೌರಿ-ಗಣೇಶ ಹಬ್ಬ ಆಚರಣೆ; ನಿಯಮ ಪಾಲಿಸಿ, ಜಿಲ್ಲಾಡಳಿತ ಜತೆ ಸಹಕರಿಸಲು ಮನವಿ

ಮಡಿಕೇರಿ : ಗೌರಿ-ಗಣೇಶ ಹಬ್ಬ ಆಚರಣೆ ಸಂಬಂಧ ಅಗತ್ಯ ಮುಂಜಾಗ್ರತೆ ವಹಿಸುವ ನಿಟ್ಟಿನಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆಗೆ ಜಿ.ಪಂ.ಸಿಇಒ ವರ್ಣಿತ್ ನೇಗಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಪೂರ್ವಭಾವಿ ಸಭೆ ನಡೆಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಪರಿಸರ ಸ್ನೇಹಿ ಗೌರಿ ಗಣೇಶ ಹಬ್ಬವನ್ನು ಆಚರಿಸುವ ನಿಟ್ಟಿನಲ್ಲಿ ಎಲ್ಲರೂ ಜಿಲ್ಲಾಡಳಿತದ ಜೊತೆ ಸಹಕರಿಸುವಂತೆ ವರ್ಣಿತ್ ನೇಗಿ ಅವರು ಕೋರಿದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಗೌರಿ-ಗಣೇಶ ಹಬ್ಬ ಆಚರಿಸುವ ಸಂಬಂಧ ಹಲವು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅದನ್ನು ಪಾಲಿಸುವಂತೆ ಜಿ.ಪಂ.ಸಿಇಒ ಅವರು ಮನವಿ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಮಾತನಾಡಿ ಪೊಲೀಸ್ ಇಲಾಖೆಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಆ ನಿಟ್ಟಿನಲ್ಲಿ ಕಾನೂನು ಮತ್ತು ನಿಯಮಗಳನ್ನು ಚಾಚು ತಪ್ಪದೆ ಪಾಲಿಸಬೇಕು. ಏನಾದರೂ ಸಮಸ್ಯೆಗಳು ಇದ್ದಲ್ಲಿ ಗಮನಕ್ಕೆ ತರುವಂತೆ ಸಲಹೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಡಿಕೇರಿ ನಗರದ ಚೇತನ್ ಅವರು ನಗರದ ಗೌರಿ ಕೆರೆಯಲ್ಲಿ ಹೂಳು ತುಂಬಿದ್ದು, ಹೂಳು ತೆಗೆಯಬೇಕಿದೆ. ಜೊತೆಗೆ ಸ್ವಚ್ಚತಾ ಕಾರ್ಯ ಆಗಬೇಕು. ವಿದ್ಯುತ್ ವ್ಯವಸ್ಥೆ ಮಾಡಬೇಕು. ಹದಗೆಟ್ಟಿರುವ ರಸ್ತೆಯನ್ನು ಸರಿಪಡಿಸಬೇಕು ಎಂದು ಅವರು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅವರು ಸ್ಥಳೀಯ ಸಂಸ್ಥೆಗಳು ಕಾರ್ಯನಿರ್ವಹಿಸಲಿವೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸುವಂತೆ ಸೂಚಿಸಿದರು. ನಗರಸಭೆ ಸದಸ್ಯರಾದ ಅರುಣ್ ಶೆಟ್ಟಿ ಅವರು ಮಾತನಾಡಿ ಗೌರಿ-ಗಣೇಶ ವಿಸರ್ಜನೆ ಸಂದರ್ಭದಲ್ಲಿ ನಗರದ ಗಣಪತಿ ಬೀದಿಯಿಂದ ಮಹದೇವ ಪೇಟೆ ಮತ್ತು ಬನ್ನಿ ಮಂಟಪದವರೆಗೆ ಸಂಚಾರ ದಟ್ಟಣೆಯನ್ನು ನಿಯಂತ್ರಣ ಮಾಡಬೇಕು ಎಂದು ಕೋರಿದರು. ಯುವ ಒಕ್ಕೂಟದ ಅಧ್ಯಕ್ಷರಾದ ಪಿ.ಪಿ.ಸುಕುಮಾರ್ ಅವರು ಮಾತನಾಡಿ ಹಾಕತ್ತೂರು ಬಳಿಯ ತೊಂಬತ್ತುಮನೆಯ ಭಜನಾ ಮಂದಿರ ಬಳಿ ವಿದ್ಯುತ್ ಮಾರ್ಗ ಹಾದು ಹೋಗಿದ್ದು, ವಿದ್ಯುತ್ ತಂತಿ ತಾಗುವಂತಿದೆ. ಇದನ್ನು ಸರಿಪಡಿಸಬೇಕು ಎಂದರು. ಸಿದ್ದಾಪುರದ ಪ್ರಮುಖರೊಬ್ಬರು ಗೌರಿ-ಗಣೇಶ ವಿಸರ್ಜನೆ ಸಂದರ್ಭದಲ್ಲಿ ಲೈಟಿಂಗ್ ವ್ಯವಸ್ಥೆ ಮಾಡುವಂತಾಗಬೇಕು ಎಂದು ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿ.ಪಂ.ಸಿಇಒ ಅವರು ಸ್ಥಳೀಯವಾಗಿ ಕೆಲವು ಕಾಮಗಾರಿಗಳು ಆಗಬೇಕಿದ್ದಲ್ಲಿ, ಸ್ಥಳೀಯ ಗ್ರಾ.ಪಂ., ಪುರಸಭೆ, ಪಟ್ಟಣ ಪಂಚಾಯಿತಿ, ನಗರಸಭೆ ಗಮನಕ್ಕೆ ತರುವಂತೆ ಸಲಹೆ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಮಾತನಾಡಿ ಗೌರಿ ಗಣೇಶ ಹಬ್ಬ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಅತೀ ಮುಖ್ಯವಾಗಿದೆ. ವೇಗವಾಗಿ ವಾಹನ ಚಲಾಯಿಸುವುದು ಸೇರಿದಂತೆ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶ ಮಾಡಬಾರದು ಎಂದು ಸಲಹೆ ಮಾಡಿದರು.

ಬ್ಯಾನರ್ ಮತ್ತು ಪೋಸ್ಟರ್ ಅಳವಡಿಸಲು ಸ್ಥಳೀಯ ಸಂಸ್ಥೆ ಹಾಗೂ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಬೇಕು. ಧ್ವನಿವರ್ಧಕ ಸಂಬಂಧಿಸಿದಂತೆ ಸುಪ್ರಿಂ ಕೋರ್ಟ್ ನಿಯಮಗಳನ್ನು ಪಾಲಿಸಬೇಕು. ರಾತ್ರಿ 10 ಗಂಟೆಯ ನಂತರ ಧ್ವನಿವರ್ಧಕ ಬಳಸಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಮುಖರೊಬ್ಬರು ಗೌರಿ-ಗಣೇಶ ವಿಸರ್ಜನೆ ಸಂದರ್ಭದಲ್ಲಿ ಪೊಲೀಸರು ಬೇಗ ಹೊರಡಿ, ಬೇಗ ಹೊರಡಿ ಎಂದು ಹೇಳುತ್ತಾರೆ. ಸಂಘಟಕರು ಇದರಿಂದ ಕಿರಿಕಿರಿ ಆಗುತ್ತದೆ ಎಂದರು. ಇದಕ್ಕೆ ಧ್ವನಿಗೂಡಿಸಿ ಮಾತನಾಡಿದ ಚೇತನ್ ಅವರು ಗಣೇಶೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ. ಆದರೆ ಪೊಲೀಸ್ ಇಲಾಖೆಯವರು 5 ಲಕ್ಷ ರೂ.ಬಾಂಡ್‍ನ್ನು ಬರೆಸಿಕೊಳ್ಳುವುದು ಏಕೆ ಎಂದು ಪ್ರಶ್ನಿಸಿದರು.

ಎಲ್ಲಾ ರೀತಿಯ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‍ಗಳು (ಕಾಂಪೋಸ್ಟೇಬಲ್, ಬಯೋ ಡಿಗ್ರಿಡೇಬಲ್ ಇತರೆ) ಪ್ಲಾಸ್ಟಿಕ್ ಧ್ವಜಗಳು, ಅಂಟಿಕೊಳ್ಳುವ ಫಿಲ್ಮ್‍ಗಳು, ಡೈನಿಂಗ್ ಟೇಬಲ್‍ನಲ್ಲಿ ಹರಡಲು ಬಳಸುವ ಪ್ಲಾಸ್ಟಿಕ್ ಹಾಳೆಗಳು, ಸ್ಟ್ರಾಗಳು, ಪ್ಲಾಸ್ಟಿಕ್ ಮೈಕ್ರೋ ಮಣಿಗಳಿಂದ ಮಾಡಿದ ವಸ್ತುಗಳು, ಪ್ಲಾಸ್ಟಿಕ್ ಪ್ಲೇಟ್‍ಗಳು, ಪ್ಲಾಸ್ಟಿಕ್ ಕಪ್‍ಗಳು ಮತ್ತು ಲೋಟಗಳು, ಪೋರ್ಕ್, ಚಮಚ, ಚಾಕುಗಳು, ಪ್ಲಾಸ್ಟಿಕ್ ಟ್ರೇಗಳು, ಸ್ವೀಟ್ ಬಾಕ್ಸ್‍ಗಳು, ಆಮಂತ್ರಣ ಪತ್ರಗಳು, ಸ್ವೀಟ್ ಪ್ಯಾಕೆಟ್‍ಗಳ ಸುತ್ತ ಸುತ್ತುವ ಪದರ ಅಥವಾ ಪ್ಯಾಕಿಂಗ್ ಫಿಲ್ಮ್‍ಗಳು ಮತ್ತು ಪ್ಲಾಸ್ಟಿಕ್ ಸ್ಟಿಕರ್‍ಗಳನ್ನು ಬಳಸದಂತೆ ಕ್ರಮವಹಿಸುವುದು ಎಂದು ತಿಳಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

RELATED ARTICLES
- Advertisment -
Google search engine

Most Popular