ಬೆಂಗಳೂರು: ಸಂಶೋಧಕ ಎಂ.ಎಂ.ಕಲಬುರ್ಗಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಾದ ವಾಸುದೇವ ಭಗವಾನ್ ಮತ್ತು ಅಮಿತ್ ಬದ್ದಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಈ ಕುರಿತಂತೆ ವಾಸುದೇವ ಭಗವಾನ್ ಮತ್ತು ಅಮಿತ್ ಬದ್ದಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿತು. ಅರ್ಜಿದಾರರ ಪರ ಹಿರಿಯ ವಕೀಲ ಎಂ.ಅರುಣ್ ಶ್ಯಾಮ್, `ಎರಡೂ ಹತ್ಯೆ ಪ್ರಕರಣಗಳಲ್ಲಿ ಅರ್ಜಿದಾರರ ವಿರುದ್ಧ ಬೈಕ್ ಕಳವು ಮಾಡಿ ಅದನ್ನು ಹತ್ಯೆಯ ಕೃತ್ಯಕ್ಕೆ ಬಳಸಿದವರಿಗೆ ನೀಡಿದ್ದಾರೆ ಎಂಬ ಆರೋಪ ಹೊರಿಸಲಾಗಿದೆ. ಆದರೆ, ಇವರ ವಿರುದ್ಧದ ಬೈಕ್ ಕಳವು ಪ್ರಕರಣ ಈಗಾಗಲೇ ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿದ್ದು ಇಬ್ಬರೂ ಖುಲಾಸೆಯಾಗಿದ್ದಾರೆ’ ಎಂದು ವಿವರಿಸಿದರು.
ಕಳೆದ ಆರೂವರೆ ವರ್ಷಗಳಿಂದ ಈ ಅರ್ಜಿದಾರರ ವಿಚಾರಣೆ ನಡೆದಿಲ್ಲ. ಒಟ್ಟು ೧೩೮ ಸಾಕ್ಷಿಗಳಲ್ಲಿ ಈ ತನಕ ಕೇವಲ ೧೦ ಸಾಕ್ಷಿಗಳನ್ನು ಮಾತ್ರವೇ ವಿಚಾರಣೆ ನಡೆಸಲಾಗಿದ್ದು ಸಾಕಷ್ಟು ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಜಾಮೀನು ಮಂಜೂರು ಮಾಡಿತು. ಪ್ರಾಸಿಕ್ಯೂಷನ್ ಪರ ಅಶೋಕ್ ಎನ್.ನಾಯಕ್ ವಾದ ಮಂಡಿಸಿದರು.