Saturday, April 19, 2025
Google search engine

Homeರಾಜ್ಯಸುದ್ದಿಜಾಲನಾಯಿ ಕಚ್ಚಿದ ಕೂಡಲೇ ರೇಬೀಸ್ ನಿರೋಧಕ ಲಸಿಕೆ ಪಡೆಯಿರಿ: ಡಿಹೆಚ್‍ಓ ಡಾ.ವೈ.ರಮೇಶ ಬಾಬು

ನಾಯಿ ಕಚ್ಚಿದ ಕೂಡಲೇ ರೇಬೀಸ್ ನಿರೋಧಕ ಲಸಿಕೆ ಪಡೆಯಿರಿ: ಡಿಹೆಚ್‍ಓ ಡಾ.ವೈ.ರಮೇಶ ಬಾಬು


ಬಳ್ಳಾರಿ: ಸಾಕು ನಾಯಿ ಅಥವಾ ಅಪರಿಚಿತ ಬೀದಿ ನಾಯಿ ಕಚ್ಚಿದ್ದಲ್ಲಿ ನಿರ್ಲಕ್ಷ್ಯ ಮಾಡದೆ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ, ರೇಬೀಸ್ ನಿರೋಧಕ ಲಸಿಕೆ ಹಾಕಿಸಿಕೊಳ್ಳುವುದರ ಮೂಲಕ ರೇಬೀಸ್ ರೋಗಕ್ಕೆ ತುತ್ತಾಗದಂತೆ ಎಚ್ಚರವಹಿಸಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಅವರು ಮನವಿ ಮಾಡಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಸಾಮಾನ್ಯವಾಗಿ ನಾಯಿ ಕಡಿತದ ಪ್ರಕರಣಗಳಲ್ಲಿ ಮುಖ್ಯವಾಗಿ ಸಾಕಿದ ನಾಯಿಗಳು ಕಚ್ಚಿದಾಗ ಅಥವಾ ಪರಿಚಿದಾಗ ನಿರ್ಲಕ್ಷ್ಯ ಮಾಡುವ ಹಾಗೂ ವೈದ್ಯಕೀಯ ಉಪಚಾರ ಪಡೆಯದೇ ಇರುವುದರಿಂದ ಸಾರ್ವಜನಿಕರು ರೇಬೀಸ್ ಖಾಯಿಲೆ ತುತ್ತಾಗುತ್ತಿದ್ದಾರೆ. ಸಾಕಿದ ಅಥವಾ ಬೀದಿ ನಾಯಿಗಳು ಕಡಿದ ಸಂದರ್ಭದಲ್ಲಿ ಸೋಪು ಮತ್ತು ನೀರಿನಿಂದ ಗಾಯವನ್ನು ಅಥವಾ ಪರಿಚಿದ ಸ್ಥಳವನ್ನು ತೊಳೆದು ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ರೇಬೀಸ್ ಚುಚ್ಚುಮದ್ದು ಪಡೆಯುವ ಮೂಲಕ ಸಂಭಾವ್ಯ ರೇಬಿಸ್ ಖಾಯಿಲೆಯನ್ನು ತಡೆಯುವುದರ ಜೊತೆಗೆ ವ್ಯಕ್ತಿಯ ಜೀವವನ್ನು ಉಳಿಸುವ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಅವರು ತಿಳಿಸಿದ್ದಾರೆ.

ನಾಯಿ, ಬೆಕ್ಕು, ಇತರೆ ಯಾವುದೇ ಪ್ರಾಣಿಗಳು ಕಚ್ಚಿದಾಗ ರೇಬೀಸ್ ಕಾಯಿಲೆ ಬರುವ ಸಾಧ್ಯತೆಯಿದ್ದು, ನಾಯಿಗಳ ಕಡಿತದಿಂದ ಹೆಚ್ಚಿನ ಪ್ರಮಾಣದಲ್ಲಿ ರೋಗ ಹರಡುವುದರಿಂದ ನಿರ್ಲಕ್ಷ್ಯ ಮಾಡದೇ ಚುಚ್ಚುಮದ್ದು ಪಡೆಯಬೇಕು ಎಂದು ವಿನಂತಿಸಿದ್ದಾರೆ.
ನಾಯಿ ಕಡಿದಾಗ ಅನುಸರಿಸಬೇಕಾದ ವಿಧಾನಗಳು ಮೊದಲನೆ ಹೆಜ್ಜೆ: ಗಾಯವನ್ನು ತಕ್ಷಣವೇ ನೀರು ಹಾಗೂ ಸಾಬೂನಿನಿಂದ ತೊಳೆಯಿರಿ, ಪಾವಿಡೋನ್ ಐಯೋಡಿನ್‍ನಂಥ ಆಂಟಿಸೇಪ್ಟಿಕ್‍ಗಳನ್ನು ಹಚ್ಚಿರಿ ಮತ್ತು ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ.


ಎರಡನೇ ಹೆಜ್ಜೆ: ವೈದ್ಯರ ನಿರ್ದೇಶನದ ಮೇರೆಗೆ ರೇಬೀಸ್ ಲಸಿಕೆಯ ಪೂರ್ಣ ಕ್ರಮವನ್ನು ತೆಗೆದುಕೊಳ್ಳಬೇಕು.
ಮೂರನೇ ಹೆಜ್ಜೆ: ತೀವ್ರವಾದ ಕಡಿತದ ಸಂದರ್ಭಗಳಲ್ಲಿ ಗಾಯಕ್ಕೆ ರೇಬೀಸ್ ಉಮ್ಯೂನೋಗ್ಲೋಬುಲಿನ್ ಚುಚ್ಚುಮದ್ದು ಪಡೆಯಬೇಕು.
ರೇಬಿಸ್ ಖಾಯಿಲೆಗೆ ಒಮ್ಮೆ ತುತ್ತಾದ ಬಳಿಕ ಯಾವುದೇ ಚಿಕಿತ್ಸೆ ಇರುವುದಿಲ್ಲವಾದರೂ ರೇಬಿಸ್ ಖಾಯಿಲೆಯು ಸೂಕ್ತ ಪೂರ್ವ ರೋಗ ನಿರೋಧಕ ಲಸಿಕೆ ಪಡೆಯುವುದರಿಂದ ಸಂಪೂರ್ಣವಾಗಿ ತಡೆಗಟ್ಟಬಹುದಾಗಿದೆ. ಸಾರ್ವಜನಿಕರು ಯಾವುದೇ ಪ್ರಾಣಿ ಕಡಿತ ಸಂದರ್ಭದಲ್ಲಿ ಗಾಬರಿ ಪಡದೇ ನಾಯಿ ಅಥವಾ ಪ್ರಾಣಿ ಕಡಿತದ 24 ಗಂಟೆಯೊಳಗೆ ಆ್ಯಂಟಿ ರೇಬಿಸ್ ಲಸಿಕೆಯನ್ನು ತಪ್ಪದೇ ಪಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಡೋಸ್ ವಿವರ: 1ನೇ ಡೋಸ್ ಮೊದಲ ದಿವಸ, 2ನೇ ಡೋಸ್ ಮೂರನೇ ದಿವಸ, 3ನೇ ಡೋಸ್ 7ನೇ ದಿವಸ, 4ನೇ ಡೋಸ್ 14ನೇ ದಿವಸ, 5ನೇ ಡೋಸ್ 28ನೇ ದಿವಸ.
ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ತಕ್ಷಣವೇ ಲಸಿಕೆ ಲಭ್ಯವಾಗುವ ನಿಟ್ಟಿನಲ್ಲಿ ಆ್ಯಂಟಿ ರೇಬಿಸ್ ಕ್ಲಿನಿಕ್‍ನ್ನು ಸ್ಥಾಪಿಸಲಾಗಿದೆ. ಸಾರ್ವಜನಿಕರು ನಾಯಿ ಕಡಿತ ಪ್ರಕರಣಗಳಲ್ಲಿ ನಿರ್ಲಕ್ಷ್ಯ ವಹಿಸದೇ ತಕ್ಷಣವೇ ಚುಚ್ಚುಮದ್ದು ಪಡೆಯಬೇಕು ಎಂದು ವಿನಂತಿಸಿದ್ದಾರೆ.

RELATED ARTICLES
- Advertisment -
Google search engine

Most Popular