ಮಂಗಳೂರು: ಇಲ್ಲಿಯ ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನ ನೀಡುವ ೨೦೨೫ನೇ ಸಾಲಿನ ಸಂದೇಶ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.
ಸಂದೇಶ ಸಾಹಿತ್ಯ ಪ್ರಶಸ್ತಿಗೆ ಬಿ.ಆರ್. ಲಕ್ಷ್ಮಣ ರಾವ್ (ಕನ್ನಡ), ಐರಿನ್ ಪಿಂಟೊ (ಕೊಂಕಣಿ) ಹಾಗೂ ಗಣೇಶ್ ಅಮೀನ್ ಸಂಕಮಾರ್ (ತುಳು) ಆಯ್ಕೆಯಾಗಿದ್ದಾರೆ. ಸಂದೇಶ ಕಲಾ ಪ್ರಶಸ್ತಿಗೆ ಚಿತ್ರ ನಿರ್ದೇಶಕ ಗಿರೀಶ ಕಾಸರವಳ್ಳಿ, ಸಂದೇಶ ಮಾಧ್ಯಮ ಪ್ರಶಸ್ತಿಗೆ ಡಿ.ವಿ. ರಾಜಶೇಖರ್, ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿಗೆ ರೋಶನ್ ಡಿಸೋಜ, ಸಂದೇಶ ಶಿಕ್ಷಣ ಪ್ರಶಸ್ತಿಗೆ ಯೆನೆಪೊಯ ಅಬ್ದುಲ್ಲ ಕುಞ್ಞಿ ಹಾಗೂ ಸಂದೇಶ ವಿಶೇಷ ಪ್ರಶಸ್ತಿಗೆ ಕೆ.ವಿ. ರಾವ್ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಬಾರಿ ವಿಶೇಷವಾಗಿ ಸಂದೇಶ ಗೌರವ ಪ್ರಶಸ್ತಿ ಹಾಗೂ ಸಂದೇಶ ಯುವ ಪ್ರತಿಭಾ ಪ್ರಶಸ್ತಿಯನ್ನು ಘೋಷಿಸಲಾಗಿದ್ದು, ಗೌರವ ಪ್ರಶಸ್ತಿಗೆ ಸಮಾಜ ಸೇವಕ ಮೈಕಲ್ ಡಿಸೋಜ ಹಾಗೂ ಸಂದೇಶ ವಿಶೇಷ ಯುವ ಪ್ರತಿಭಾ ಪ್ರಶಸ್ತಿಗೆ ರೆಮೋನ ಇವೆಟ್ ಪಿರೇರಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನದ ನಿರ್ದೇಶಕ ಫಾ. ಸುದೀಪ್ ಪಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಶಸ್ತಿಯು ತಲಾ ೨೫ ಸಾವಿರ ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ. ಫೆ. ೧೦ರಂದು ಸಂಜೆ ೫.೩೦ಕ್ಕೆ ಸಂದೇಶ ಸಂಸ್ಥೆಯ ಆವರಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದರು. ಆಯ್ಕೆ ಸಮಿತಿ ಸದಸ್ಯರಾದ ನಾ. ದಾಮೋದರ ಶೆಟ್ಟಿ, ಬಿ.ಎ. ಮೊಹಮ್ಮದ್ ಹನೀಫ್, ರೂಪಕಲಾ ಆಳ್ವ, ಸೈಮನ್ ಕೊಹೆಲೊ ಸುದ್ದಿಗೋಷ್ಠಿಯಲ್ಲಿದ್ದರು.
