ಚಾಮರಾಜನಗರ : ಶ್ರೀ ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನ, ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ, ಶಿರಸಿ ಉತ್ತರ ಕನ್ನಡ, ಕರ್ನಾಟಕ. ಶ್ರೀ ಭಗವದ್ಗೀತಾ ಅಭಿಯಾನ ಕಾರ್ಯಕ್ರಮದ ಮೂಲಕ ರಾಜ್ಯದ ಮೂಲೆ ಮೂಲೆಗಳಲ್ಲೂ ಕೋಟ್ಯಾಂತರ ವಿದ್ಯಾರ್ಥಿಗಳು, ನಾಗರಿಕರು ಭಗವದ್ಗೀತೆ ಪಾರಾಯಣ ಮಾಡುವ ಮೂಲಕ ಆತ್ಮಜ್ಞಾನವನ್ನು ಉಜ್ವಲಗೊಳಿಸಿಕೊಂಡು ಶ್ರೇಷ್ಠವಾದ ಜೀವನ ನಡೆಸಲು ಉತ್ತಮ ನಾಗರಿಕರಾಗಿ ಬದುಕಲು ಸಾಧ್ಯವಾಗುವ ಭಗವದ್ಗೀತೆಯ ನಿರಂತರ ಪಾರಾಯಣ ಕಾರ್ಯಕ್ರಮವನ್ನು ರೂಪಿಸುತ್ತಿದೆ. 2025 ರಲ್ಲಿ 11ನೇ ಅಧ್ಯಾಯವನ್ನು ಇಡೀ ರಾಜ್ಯದ ಕೋಟ್ಯಾಂತರ ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳುವ ಮೂಲಕ ತಮ್ಮ ಜೀವನ ಪಥಕ್ಕೆ ಉತ್ತಮ ಮಾರ್ಗವನ್ನು ಕಲ್ಪಿಸಿಕೊಂಡಿದ್ದಾರೆ. ಭಗವದ್ಗೀತಾ ಅಭಿಯಾನವನ್ನು ಕಳೆದ ದಶಕಗಳಿಂದ ನಿರಂತರವಾಗಿ ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನ ನಡೆಸಿಕೊಂಡು ನಮ್ಮ ಸಂಸ್ಕೃತಿ ,ಪರಂಪರೆ, ಮಹಾ ಗ್ರಂಥಗಳ ಮೌಲ್ಯಗಳ ಚಿಂತನೆಯನ್ನು ಸರ್ವರಿಗೂ ತಿಳಿಸುವ ಅದ್ಭುತ ಕಾರ್ಯವನ್ನು ಮಾಡುತ್ತಿದೆ.
ಭಗವದ್ಗೀತೆ ಈ ಪದವೇ ಒಂದು ರೋಮಾಂಚನ .ಮಾನವನ ನರನಾಡಿಗಳಲ್ಲಿ ಮಹಾನ್ ಶಕ್ತಿಯನ್ನು ತುಂಬಿ ಚೈತನ್ಯವನ್ನು ಹೆಚ್ಚಿಸುವ ಭಗವದ್ಗೀತೆ. ಶ್ರೀ ಕೃಷ್ಣ ಪರಮಾತ್ಮನ ಹೃದಯ ಸಂಬಂಧದ ಮೂಲಕ ಜಗತ್ತಿಗೆ ಅರ್ಪಿಸಿ ಬದುಕಿಗೆ ದಾರಿದೀಪವಾದ ಭಗವದ್ಗೀತೆ ವಿಶೇಷವಾದದ್ದು. ಸಮಸ್ತ ಮಾನವ ಕುಲವನ್ನು ಇಟ್ಟುಕೊಂಡು ಅರ್ಜುನನ ವಿಷಾದ ಹಾಗೂ ಶ್ರೀ ಕೃಷ್ಣನ ಗೀತ ಉಪದೇಶಗಳನ್ನು ಗಮನಿಸಿದಾಗ ಮಾನವರಲ್ಲಿ ಒಂದಲ್ಲ ಒಂದು ಕಾರಣದಿಂದ ಅನೇಕ ಸಮಸ್ಯೆಗಳು, ಸಂದಿಗ್ಧತೆ ,ಭಯ, ತಲ್ಲಣ ,ವಿಷಾದ, ದುಃಖ ,ಗೊಂದಲ ಮೂಡಿ ಅಶಾಂತಿಗೆ ಒಳಗಾಗಿರುತ್ತಾನೆ. ಹುಟ್ಟು ಸಾವು ,ಸುಖ ದುಃಖ, ಸೋಲು ಗೆಲುವು, ಆಸೆ ದುರಾಸೆ, ಅಹಂಕಾರ, ಕೋಪ ,ಕ್ರೋಧ, ಕಾಮ ಮುಂತಾದ ಮಾನವ ಇಷ್ಟದ ದಾರಿಯಲ್ಲಿ ಸಾಗಿ ತನ್ನ ವಿವೇಕವನ್ನು ಕಳೆದುಕೊಂಡು ಅರ್ಥರಹಿತವಾದ ಜೀವನವನ್ನು ನಡೆಸಿ ವ್ಯರ್ಥ ಮಾಡಿಕೊಳ್ಳುವ ಈ ಸಂದರ್ಭದಲ್ಲಿ ಅಧರ್ಮವೇ ಹೆಚ್ಚಾಗಿ ಪ್ರದರ್ಶನವಾಗಿ ಒಳ್ಳೆಯವರು ಬದುಕಲು ಸಾಧ್ಯವಿಲ್ಲ ಎಂಬ ಭಾವದೊಂದಿಗೆ ವಾತಾವರಣ ಸೃಷ್ಟಿಯಾಗುತ್ತಿರುವ ಈ ಕಾಲಘಟ್ಟದಲ್ಲಿ ನಿಜವಾಗಿಯೂ ಪ್ರತಿಯೊಬ್ಬ ಮನುಷ್ಯನು ಭಗವದ್ಗೀತೆಯ ಗ್ರಂಥವನ್ನು ಅಧ್ಯಯನ ಮಾಡಬೇಕು.
ಜನ ಜೀವನದಲ್ಲಿ ಭಗವದ್ಗೀತೆ ಉಳಿಯಬೇಕು . ಭಗವದ್ಗೀತೆಯು ಭಗವಂತನ ವಾಣಿಯಾಗಿದೆ .ಭಕ್ತಿ, ಕರ್ಮ, ಜ್ಞಾನದ ಮಾರ್ಗವನ್ನು ತಿಳಿಸಿದರು. ಸಹ ಆ ಮಾರ್ಗವನ್ನು ಹಿಡಿದು ಸಾಗುವ ದಾರಿ ಬಹಳ ಮುಖ್ಯವಾದದ್ದು . ನಾಗರೀಕರಿಗೆ ಮಹಿಳೆಯರಿಗೆ , ರೈತರಿಗೆ, ಯುವಕರಿಗೆ ,ಸರ್ವರಿಗೂ ಪ್ರೇರಕವಾದದ್ದು ಗೀತೆಯ ಶಕ್ತಿ .
ಗೀತೆಯ ಶಕ್ತಿ ವಿಶೇಷವಾಗಿ ವಿದ್ಯಾರ್ಥಿ ಸಮೂಹಕ್ಕೆ ಯುವ ಸಮುದಾಯಕ್ಕೆ ನಿಜವಾಗಿ ಅರ್ಥವಾದಾಗ ವಿಶೇಷವಾದಂತಹ ಶ್ರೇಷ್ಠ ಮಾರ್ಗವನ್ನು ಅನುಸರಿಸಬಹುದು. ಭಗವದ್ಗೀತೆ ಎಂಬುದು ಪುರಾಣ ಗ್ರಂಥವು ಹೌದು ಸಂಸ್ಕೃತಿ ಗ್ರಂಥವು ಹೌದು. ಮಾನವ ಶಾಸ್ತ್ರವೂ ಹೌದು ಸಮನ್ವಯ ಶಾಸ್ತ್ರ , ಕೌಶಲ್ಯ ಶಾಸ್ತ್ರವೂ ಹೌದು. ಯಾವ ವ್ಯಕ್ತಿ ಹೇಗೆ ಅರ್ಥ ಮಾಡಿಕೊಳ್ಳುತ್ತಾನೆ ಹಾಗೆ ಆ ಭಗವದ್ಗೀತೆ ವಿಶೇಷವಾಗಿ ಅರ್ಥ ಮಾಡಿಕೊಂಡು ಹೋಗುತ್ತದೆ.
ವಿದ್ಯಾರ್ಥಿಗಳಲ್ಲಿ ಯುವಕರಲ್ಲಿ ನಾಗರೀಕರಲ್ಲಿ ಪ್ರತಿವರ್ಷ ಒಂದೊಂದು ಅಧ್ಯಾಯದ ಪಾರಾಯಣವು ಸಾಮೂಹಿಕವಾಗಿ ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನದ ವತಿಯಿಂದ ಜಿಲ್ಲೆಯ ಸಮಸ್ತ ಜನರ ಆಶೀರ್ವಾದದಿಂದ ನಡೆಯುತ್ತಿದೆ ಭಗವದ್ಗೀತೆ ವಿದ್ಯಾರ್ಥಿಗಳ ಅಮೃತ ಸಂಜೀವಿನಿಯಾಗಿದೆ ಭಗವದ್ಗೀತೆ ಸಮಾಜದ ಎಲ್ಲ ವರ್ಗಗಳ ಎಲ್ಲ ಹಂತಗಳ ಎಲ್ಲ ವಯೋಮಾನದ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಮಾರ್ಗದರ್ಶನವನ್ನು ನೀಡಿ ಮುನ್ನಡೆಸುವ ವಿಶೇಷ ಗ್ರಂಥ ಜಗತ್ತಿನಲ್ಲಿ ವ್ಯಕ್ತಿತ್ವ ನಿರ್ಮಾಣ ಕಾರ್ಯ ಗ್ರಂಥವಾದ ಭಗವದ್ಗೀತೆಯಂತೆ ಮತ್ತೊಂದು ಗ್ರಂಥ ಇಲ್ಲ.
ಹೆನ್ರಿ ಡೇವಿಡ್ ತೋರೋ ರವರು ನಾನು ಪ್ರತಿನಿತ್ಯ ಪರಮ ಅದ್ಭುತವಾಗಿರುವ ಹಾಗೂ ವಿಶ್ವಾತ್ಮ ತತ್ವವನ್ನು ಹೊಂದಿರುವ ಭಗವದ್ಗೀತೆಯಲ್ಲಿಮುಳುಗಿರುತ್ತೇನೆ. ಗೀತೆಗೆ ಈಗಿನ ಆಧುನಿಕ ಪ್ರಪಂಚದ ನೂತನ ಆವಿಷ್ಕಾರಗಳು ಮತ್ತು ಸಾಹಿತ್ಯವನ್ನು ಹೋಲಿಸಿ ನೋಡಿದಾಗ ಅವು ನನಗೆ ಅಲ್ಪ ಮತ್ತು ಬಾಲಿಶವಾಗಿ ಕಾಣಿಸುತ್ತದೆ ಎಂದು ತಿಳಿಸಿದ್ದಾನೆ.
ವಿದ್ಯಾರ್ಥಿಗಳು ಏಕೆ ಭಗವದ್ಗೀತೆಯನ್ನು ಅರಿಯಬೇಕು. ವಿದ್ಯಾರ್ಥಿಗಳು ಗೀತೆಯನ್ನು ಅಧ್ಯಯನ ಮಾಡಿ ಅಲ್ಲಿರುವ ಪರಮ ಅದ್ಭುತವಾದ ವಿಚಾರಗಳನ್ನು ತಿಳಿದು ಜೀವನದಲ್ಲಿ ಅನುಷ್ಠಾನ ಮಾಡಿಕೊಂಡಾಗ ಶ್ರೇಷ್ಠ ಸಾಧಕರಾಗಿ ಸಮಾಜದಲ್ಲಿ ಬದುಕಬಹುದು.
ವಿದ್ಯಾರ್ಥಿಗಳಲ್ಲಿ ಮೊಟ್ಟ ಮೊದಲು ದೌರ್ಬಲ್ಯಗಳನ್ನು ಹೋಗಲಾಡಿಸುವುದು. ದೌರ್ಬಲ್ಯವೂ ಮಾನವನ ಒಂದು ಗುಣ ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಕಲಿಕೆಯ ಸಂದರ್ಭದಲ್ಲಿ ಹಲವಾರು ರೀತಿಯ ದೌರ್ಬಲ್ಯಗಳು ಕಾಣಿಸಿಕೊಳ್ಳುತ್ತವೆ. ಈ ದೌರ್ಬಲ್ಯಗಳಿಗೆ ಎಲ್ಲವೂ ಕೂಡ ಆತ್ಮಶಕ್ತಿಯನ್ನು ತುಂಬಿಸುವುದು ಭಗವದ್ಗೀತೆಯ ಕಾರ್ಯವಾಗಿದೆ. ಭಗವದ್ಗೀತೆ ಮನುಷ್ಯನಲ್ಲಿ ಆತ್ಮವಿಶ್ವಾಸವನ್ನು, ಧೈರ್ಯವನ್ನು, ಸಾಹಸವನ್ನು ,ನಂಬಿಕೆಯನ್ನು ಭಕ್ತಿಯನ್ನು, ಜ್ಞಾನವನ್ನು, ಕರ್ಮವನ್ನು ತಿಳಿಸುವ ಏಕೈಕ ಗ್ರಂಥವಾಗಿದೆ .
ಇಂತಹ ಭಗವದ್ಗೀತೆಯು ಪ್ರತಿಯೊಬ್ಬ ವ್ಯಕ್ತಿಗೂ ನಿನ್ನ ಏಳಿಗೆಗೆ ನೀನೇ ಶಿಲ್ಪಿ ಎಂಬಂತೆ ಪ್ರತಿಯೊಬ್ಬ ಮಾನವನ ಉದ್ಧಾರಕ್ಕೆ ಭಗವದ್ಗೀತೆಗಳು ತುಂಬಾ ಪ್ರಭಾವವನ್ನು ಬೀರಿದೆ . ನಮ್ಮ ಮನಸ್ಸು ಹತೋಟಿಯಲ್ಲಿದ್ದರೆ ಅದು ನಮಗೆ ಮಿತ್ರನಾಗುತ್ತದೆ. ನಮ್ಮ ಮನಸ್ಸು ನಮ್ಮ ಹತೋಟಿಯಲ್ಲಿ ಇಲ್ಲದಿದ್ದಾಗ ಅದೇ ನಮಗೆ ಶತ್ರುವಾಗುತ್ತದೆ. ಹೀಗಾಗಿಯೇ ವಿವೇಕಾನಂದರು ನಿನ್ನ ಏಳಿಗೆಗೆ ನೀನೇ ಶಿಲ್ಪಿ ಎಂದು ಸುಂದರವಾಗಿ ನಮಗೆಲ್ಲರೂ ತಿಳಿಸಿದ್ದಾರೆ.
ಭಗವದ್ಗೀತೆಯ ಪ್ರೇರಕವೂ ಅದೇ ಆಗಿದೆ. ವಿದ್ಯಾರ್ಥಿಗಳಲ್ಲಿ ಕೌಶಲ್ಯ ಶಕ್ತಿಯನ್ನು ತಿಳಿಸುವಂಥದ್ದು ಕರ್ಮದಲ್ಲಿ ಕುಶಲತೆಯನ್ನು ಅಳವಡಿಸಿಕೊಳ್ಳುವುದು ಗೀತೆಯ ಸಂದೇಶದಲ್ಲಿ ಸ್ಪಷ್ಟವಾಗಿ ಕರ್ಮಗಳನ್ನು ಮಾಡುತ್ತ ನಮ್ಮ ವ್ಯಕ್ತಿತ್ವ ರೂಪಗೊಳ್ಳಬೇಕು. ಮನಸ್ಸು ಪರಿಪಕ್ವವಾಗಬೇಕು. ಸುಖ-ದುಃಖ ,ಲಾಭ ನಷ್ಟ ,ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವಂತಹ ಸಮತ್ವ ಬುದ್ಧಿಯನ್ನು ಬೆಳೆಸಿಕೊಳ್ಳಬೇಕು. ಬಾಹ್ಯ ಕೌಶಲ್ಯದ ಜೊತೆಗೆ ಆಂತರಿಕ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಈ ಆಂತರಿಕ ಕೌಶಲ್ಯಗಳ ರಹಸ್ಯವನ್ನು ಭಗವದ್ಗೀತೆಯಲ್ಲಿ ನಾವು ತಿಳಿಯಬಹುದು. ಆಂತರಿಕ ಕೌಶಲ್ಯಗಳ ಶಕ್ತಿಯ ವಿಚಾರಧಾರೆಗಳಿಂದ ಮನಸ್ಸು ದೃಢವಾಗಿ ಶಕ್ತಿಯುತವಾಗಿ ಪುಟಗೊಂಡು ಅರಳುತ್ತವೆ. ಆ ಮೂಲಕ ತನ್ನ ಯೋಚನೆಗೆ ತಕ್ಕಹಾಗೆ ಯೋಜನೆಯನ್ನು ರೂಪಿಸಿಕೊಂಡು ಶಕ್ತಿಶಾಲಿ ಮಾನವನಾಗಿ ರೂಪುಗೊಳ್ಳಲು ಸಹಾಯವಾಗುತ್ತದೆ. ನಾವು ಮಾಡುವ ಪ್ರತಿಯೊಂದು ಕಾರ್ಯದ ಇಚ್ಛಾ ಶಕ್ತಿಯು ಹೆಚ್ಚುತ್ತದೆ. ಜೀವನ ಮೌಲ್ಯಗಳ ಮೂಲಕ ವ್ಯಕ್ತಿತ್ವ ನಿರ್ಮಾಣವನ್ನು ಜೀವನದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು. ಇದಕ್ಕೆ ಉದಾಹರಣೆ, ಡಾ. ಎಪಿಜೆ ಅಬ್ದುಲ್ ಕಲಾಂ ಮತ್ತು ಸರ್ ಎಂ ವಿಶ್ವೇಶ್ವರಯ್ಯ ಹಾಗೂ ಮುಂತಾದ ಅನೇಕ ಜಗತ್ತಿನ ಸಾಧಕರಿಗೆ ಭಗವದ್ಗೀತೆ ಮಾದರಿಯಾಗಿದೆ.
ವಿದ್ಯಾರ್ಥಿಗಳು ಭಗವದ್ಗೀತೆಯ ವಿಚಾರಗಳನ್ನು ಅನುಷ್ಠಾನ ಮಾಡಿಕೊಂಡು ಯಶಸ್ಸನ್ನು ಕಾಣಬಹುದು.
ವ್ಯಕ್ತಿತ್ವ ರೂಪಗೊಳ್ಳುವ ವಿದ್ಯಾರ್ಜನೆಯ ಸಮಯದಲ್ಲಿ ಭಗವದ್ಗೀತೆಯನ್ನು ಅರ್ಥಪೂರಿತವಾಗಿ ತಿಳಿದುಕೊಂಡಾಗ ಸಮಾಜದ ಸರ್ವ ಶ್ರೇಷ್ಠ ವ್ಯಕ್ತಿಯಾಗಿ ರೂಪುಗೊಳ್ಳಲು ಸಹಾಯವಾಗುತ್ತದೆ.
ತನ್ನ ವಿದ್ಯಾಭ್ಯಾಸದಲ್ಲಿ ಉನ್ನತಿಯನ್ನು ಸಾಧಿಸಬಹುದು. ಏಕಾಗ್ರತೆ ,ಜ್ಞಾನಶಕ್ತಿ ,ಕ್ರಿಯಾಶಕ್ತಿ ಉನ್ನತವಾಗುತ್ತದೆ .ಆ ಮೂಲಕ ವ್ಯಕ್ತಿತ್ವದ ಅಪಾರವಾದ ಸಂದೇಶವನ್ನು ನೀಡುತ್ತದೆ.
ಆಧ್ಯಾತ್ಮಿಕ, ಸಾಂಸ್ಕೃತಿಕ ಶಕ್ತಿ ರಾಷ್ಟ್ರವಾಗಿರುವ ಭಾರತ ವಿಶ್ವಕ್ಕೆ ಮಾದರಿಯಾಗಿದೆ. ಭಾರತದ ಶಿಕ್ಷಣ ಪದ್ಧತಿಯಲ್ಲಿ ಗೀತೆಯ ಮೌಲ್ಯಗಳನ್ನು ಅಳವಡಿಸುವುದು ಅತ್ಯಂತ ಅವಶ್ಯಕವಾಗಿದೆ . ವಿದ್ಯಾರ್ಥಿಗಳಲ್ಲಿ ಇರುವ ಆಂತರಿಕ ವಿಕಾಸವನ್ನು ಉಂಟು ಮಾಡಲು ಭಗವದ್ಗೀತೆಯ ಸಾರ ಸಂದೇಶ ಅರಿಯೋಣ. ಸಣ್ಣ ಸಣ್ಣ ಕಾರಣಗಳಿಗೂ ಧೈರ್ಯಗೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಸನ್ನಿವೇಶಗಳನ್ನು ದೂರ ಮಾಡಿಕೊಳ್ಳಲು ಭಗವದ್ಗೀತೆ ಪರಿಣಾಮಕಾರಿಯಾದ ಗ್ರಂಥವಾಗಿದೆ.
ಚಾಮರಾಜನಗರ ಜಿಲ್ಲಾ ಭಗವದ್ಗೀತಾ ಅಭಿಯಾನ ಸಮಿತಿಯಿಂದ ಸಾವಿರಾರು ಮಕ್ಕಳ ಹಾಗೂ ನಾಗರೀಕರ ಒಡಗೂಡಿ 23ರ ಶುಕ್ರವಾರ ಚಾಮರಾಜನಗರದಲ್ಲಿ ಪಾರಾಯಣ ಕಾರ್ಯಕ್ರಮ ನಡೆಯುತ್ತಿರುವುದು ಬಹಳ ಸಂತೋಷಕರವಾದ ವಿಷಯ.
ಸುರೇಶ್ ಎನ್ ಋಗ್ವೇದಿ
ಉಪನ್ಯಾಸಕರು,
ಚಾಮರಾಜನಗರ.
9902317670



