ಬೆಂಗಳೂರು : ಸರ್ಕಾರಿ ಸ್ವಾಯತ್ತ ವೈದ್ಯಕೀಯ ಕಾಲೇಜುಗಳಲ್ಲಿ ೨೦೨೫-೨೬ನೇ ಶೈಕ್ಷಣಿಕ ವರ್ಷದಿಂದ ಅನಿವಾಸಿ ಭಾರತೀಯ (NRI) ಕೋಟಾ ಆರಂಭಿಸಲು ಸೂಪರ್ ನ್ಯೂಮರರಿ ಎಂಬಿಬಿಎಸ್ ಸೀಟುಗಳನ್ನು ಮಂಜೂರು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ವೈದ್ಯಕೀಯ ಶಿಕ್ಷಣ ಇಲಾಖೆ ಪತ್ರ ಬರೆದಿದೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರು ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‌ಎಂಸಿ) ಅಧ್ಯಕ್ಷರಿಗೆ ಈಕುರಿತು ಪತ್ರ ಬರೆದಿದ್ದು, ರಾಜ್ಯದಲ್ಲಿರುವ ೨೨ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಕ್ಕಾಗಿ ೫೦೮ ಹೆಚ್ಚುವರಿ ಸೂಪರ್ ನ್ಯೂಮರರಿ (supernumerary) ಎಂಬಿಬಿಎಸ್ ಸೀಟುಗಳನ್ನು ಸೃಷ್ಟಿಸುವ ಮೂಲಕ ಶೇ ೧೫ರಷ್ಟು ಎನ್‌ಆರ್ ಐ ಕೋಟಾ ಮಂಜೂರು ಮಾಡುವಂತೆ ಮನವಿ ಮಾಡಿದ್ದಾರೆ.
ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಯುಜಿ-ಎಂಬಿಬಿಎಸ್ ವಾರ್ಷಿಕ ಮಂಜೂರಾದ ಸೀಟುಗಳ ಮೇಲೆ ಹೆಚ್ಚುವರಿ ಸೀಟುಗಳನ್ನು ರಚಿಸುವುದು ಸೂಪರ್ ನ್ಯೂಮರರಿ ಉದ್ದೇಶವಾಗಿದೆ. ಪ್ರಸ್ತಕ ವೈದ್ಯಕೀಯ ಶಿಕ್ಷಣಇಲಾಖೆಯಡಿ ೨೨ ಸರ್ಕಾರಿ ವೈದ್ಯಕೀಯ ಕಾಲೇಜುಗಳು ೨೦೨೩-೨೪ನೇ ಸಾಲಿನಲ್ಲಿ ೩,೪೫೦ ಸೀಟುಗಳ ಸಾಮಥ್ರ್ಯವನ್ನು ಹೊಂದಿದ್ದು ಅದರಲ್ಲಿ ೮೫% (೨೯೨೯ ಸೀಟುಗಳು) ಕರ್ನಾಟಕ ಕೋಟಾ ಮತ್ತು ೫೨೧ ಅಂದರೆ೧೫% ಅಖಿಲ ಭಾರತ ಕೋಟಾ ಆಗಿದೆ.
ಈಗಾಗಲೇ ರಾಜಸ್ಥಾನ, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಪುದುಚೇರಿಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ.೭-೧೫ರಷ್ಟು ಎನ್ ಆರ್ ಐ ಕೋಟಾವನ್ನು ನೀಡಿರುವ, ನಿದರ್ಶನಗಳನ್ನು ಹಾಗು ಈ ರಾಜ್ಯಗಳು ಎನ್ ಆರ್ ಐ ವಿದ್ಯಾರ್ಥಿಗಳಿಗೆ ವಾರ್ಷಿಕ ೭೫,೦೦೦ ಡಾಲರ್ ದಿಂದ ೧೦೦,೦೦೦ ಡಾಲರ್ ಗಿಂತ ಹೆಚ್ಚು ಶುಲ್ಕ ವಿಧಿಸಿರುವುದ್ದನು ಸಚಿವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಬಜೆಟ್ ಹಂಚಿಕೆ, ವಿದ್ಯಾರ್ಥಿಗಳ ಶುಲ್ಕ, ಕೇಂದ್ರ ಮತ್ತು ರಾಜ್ಯಅನುದಾನಗಳು ಮತ್ತು ಇತರ ದೇಣಿಗೆಗಳ ಹೊರತಾಗಿಯೂ ರಾಜ್ಯದ ಸ್ವಾಯತ್ತ ವೈದ್ಯಕೀಯ ಸಂಸ್ಥೆಗಳು ಹಣದ ಕೊರತೆಯನ್ನು ಎದುರಿಸುತ್ತಿವೆ ಎಂದು ಪಾಟೀಲ್ ಪತ್ರದಲ್ಲಿ ಹೇಳಿದ್ದಾರೆ.