Friday, April 4, 2025
Google search engine

Homeಸ್ಥಳೀಯಮುಡಾಗೆ ನಿವೇಶನ ವಾಪಸ್ ಕೊಟ್ಟು ತನಿಖೆ ಮಾಡಿಸಿ: ಸಿಎಂ ಸಿದ್ದರಾಮಯ್ಯಗೆ ಪ್ರತಾಪ್ ಸಿಂಹ ಸಲಹೆ

ಮುಡಾಗೆ ನಿವೇಶನ ವಾಪಸ್ ಕೊಟ್ಟು ತನಿಖೆ ಮಾಡಿಸಿ: ಸಿಎಂ ಸಿದ್ದರಾಮಯ್ಯಗೆ ಪ್ರತಾಪ್ ಸಿಂಹ ಸಲಹೆ

ಮೈಸೂರು: ಸಿಎಂ ಸಿದ್ದರಾಮಯ್ಯ ಅವರೇ, ನಿಮಗೆ ಬಂದಿರುವ ನಿವೇಶನವನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ವಾಪಾಸ್ ಕೊಟ್ಟು ತನಿಖೆ ಮಾಡಿಸಿ ಎಂದು ಮೈಸೂರು ಕೊಡಗು ಮಾಜಿ ಸಂಸದ ಪ್ರತಾಪ್ ಸಿಂಹ ಸಲಹೆ ನೀಡಿದರು.

ಸಿದ್ದರಾಮಯ್ಯರ 40 ವರ್ಷದ ರಾಜಕಾರಣವನ್ನು ಗಮನಿಸಿದರೆ ಅವರನ್ನು ಭ್ರಷ್ಟ ಅನ್ನಲು ಸಾಧ್ಯವಿಲ್ಲ. ಆದರೆ, ಈಗ ಸಿದ್ದರಾಮಯ್ಯ ಬಗ್ಗೆ ಅನುಮಾನ ಶುರುವಾಗಿದೆ. ಸೈಟ್ ವಾಪಾಸ್ ಕೊಟ್ಟು ತನಿಖೆ ಮಾಡಿಸುವುದೇ ಸೂಕ್ತ. ಇಲ್ಲದೇ ಇದ್ದರೆ ಸಿಎಂ‌ ಕುಟುಂಬದ ಕೇಸ್ ಇಟ್ಟುಕೊಂಡು ಹಲವರು ಬಚಾವ್ ಆಗುತ್ತಿದ್ದಾರೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯರನ್ನು ಉದ್ದೇಶಿಸಿ ಮಾತನಾಡಿದ ಪ್ರತಾಪ್ ಸಿಂಹ್, 40 ವರ್ಷಗಳಲ್ಲಿ ಕಳಂಕ ಅಂಟಿಸಿ ಕೊಳ್ಳದಿರುವ ನೀವು ಇದ್ಯಾವುದೋ 16 ಸೈಟಿಗೆ ಕಳಂಕ ಅಂಟಿಸಿಕೊಳ್ಳುತ್ತಾ ಇದ್ದೀರಿ. ಇದು ಬೇಕಾ ನಿಮಗೆ? ಮುಂದಿನ ಮೂರವರೆ ವರ್ಷ ನೀವೇ ಸಿಎಂ ಆಗಿ ಇರುತ್ತೀರಿ. ಇಡೀ ಮೂರೂವರೆ ವರ್ಷ ಇದೇ ಆರೋಪಕ್ಕೆ ತುತ್ತಾಗುತ್ತೀರಿ. ನೊಣ ತಿಂದು ಜಾತಿ ಕೆಡಿಸಿಕೊಳ್ಳಬೇಡಿ ಎಂದರು.

ಈ ಹಿಂದೆ ಸಿಎಂ ಆಗಿದ್ದವರ ಆಸ್ತಿಗಳನ್ನೆಲ್ಲ ನೋಡಿದರೆ ಸಿದ್ದರಾಮಯ್ಯ ಆಸ್ತಿ ಏನೂ ಅಲ್ಲ. ಮುಡಾ ಹಗರಣವನ್ನು ಸಂತೋಷ್ ಹೆಗ್ಡೆ, ಎನ್ ಕುಮಾರ್ ಅವರಂಥ ವ್ಯಕ್ತಿಗಳಿಂದ ನ್ಯಾಯಾಂಗ ತನಿಖೆ ಮಾಡಿಸಿ ಎಂದು ಪ್ರತಾಪ್ ಸಿಂಹ ಹೇಳಿದರು.

ಮರೀಗೌಡ ದಡ್ಡ ಶಿಖಾಮಣಿ. ನಾನು ಮುಡಾದಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಒಂದು ಸೈಟ್ ಕೊಡಿಸಿದ್ದರೆ, ತೆಗೆದುಕೊಂಡಿದ್ದರೆ ತೋರಿಸಲಿ. ನಾನು ಮುಡಾಗೆ ಯಾವಾತ್ತೂ ವ್ಯವಹಾರಕ್ಕೆಂದು ಹೋಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ತಾಯಿ ಚಾಮುಂಡಿಯೇ ಮುಂದಿನ ದಾರಿ ತೋರಿಸುತ್ತಾಳೆ:

ರಾಜಕೀಯದಲ್ಲಿ ಏನೋ ಮಾಡುತ್ತೇವೆ ಎಂದು ಹೇಳಬಾರದು. ಹೇಳಿದರೆ ಕೆಲವರು ಅದಕ್ಕೂ ಬೇರೆ ಸ್ಕೀಂ ಹಾಕಿ ಬಿಡುತ್ತಾರೆ. ತಾಯಿ ಚಾಮುಂಡಿಯೇ ನನಗೆ ಮುಂದಿನ ದಾರಿ ತೋರಿಸುತ್ತಾಳೆ. ನಾನು ಜನರಿಂದ ತಿರಸ್ಕೃತನಾದ ವ್ಯಕ್ತಿ ಅಲ್ಲ. ಏನೋ ಕೆಲವರಿಂದಾಗಿ ಟಿಕೆಟ್ ತಪ್ಪಿತು. ಹಾಗಂತ ಇದೇ ಅಂತಿಮ ಅಲ್ಲವೇ ಅಲ್ಲ ಎಂದರು.

ಸಿದ್ದರಾಮಯ್ಯ ಮೂರೂವರೆ ವರ್ಷ ಸಿಎಂ ಅಗಿರುತ್ತಾರೆ ಎಂದು ಅವರ ಹಿಂಬಾಲಕರು ಹೇಳುತ್ತಿರುತ್ತಾರೆ. ಹೀಗಾಗಿ ನಾನು ಹೇಳಿದೆ ಅಷ್ಟೇ ಎಂದು ಸಿದ್ದರಾಮಯ್ಯ ಅವಧಿ ಬಗ್ಗೆ ಸ್ಪಷ್ಟನೆಯನ್ನೂ ನೀಡಿದರು.

ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆದರೂ ಖುಷಿಯೇ. ಅವರು ಸಹ ಹಳೇ ಮೈಸೂರು ಭಾಗದವರೇ. ಸಿದ್ದರಾಮಯ್ಯ ಸಹ ಮೈಸೂರಿನವರೇ. ಅವರು ಬೇರೆ ಪಕ್ಷದವರು ಇರಬಹುದು, ಆದರೆ ಅವರು ಮೈಸೂರಿನವರು ಎಂಬ ಹೆಮ್ಮೆ ಇದೆ ಎಂದು ಪ್ರತಾಪ್ ಸಿಂಹ ಹೇಳಿದರು.

RELATED ARTICLES
- Advertisment -
Google search engine

Most Popular