ಮೈಸೂರು: ಕನ್ನಡ ಭಾಷೆಗೆ ಮೊದಲ ಆದ್ಯತೆಯನ್ನು ನೀಡಬೇಕೆಂದು ಹುಣಸೂರಿನ ತಹಸೀಲ್ದಾರ್ ಎಂ.ಎಸ್.ಯದುಗಿರೀಶ್ ಹೇಳಿದರು. ಅವರು ಕರ್ನಾಟಕ ಪ್ರೆಸ್‌ಕ್ಲಬ್ ಬೆಂಗಳೂರು ಹಾಗೂ ಕರ್ನಾಟಕ ಪ್ರೆಸ್‌ಕ್ಲಬ್‌ನ ಕೃಷ್ಣರಾಜನಗರ ತಾಲ್ಲೂಕು ಘಟಕದ ಸಂಯುಕ್ತಾಶ್ರಯದಲ್ಲಿ ಮೈಸೂರಿನ ರೋಟರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸುವರ್ಣ ಕರ್ನಾಟಕ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಮತ್ತು ವಿವಿಧ ಕ್ಷೇತ್ರಗಳ ನಾಡಿನ ಸಾಧಕರುಗಳಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಕೇವಲ ನವೆಂಬರ್ ತಿಂಗಳಿಗೆ ಸೀಮಿತಗೊಳಿಸಬಾರದು. ನಿರಂತರವಾಗಿ ಕನ್ನಡದ ಹಲವು ಮಾದರಿಯ ವಿನೂತನ ಕಾರ್ಯಕ್ರಮಗಳನ್ನು ನಡೆಸಬೇಕು. ಪ್ರತಿಯೊಬ್ಬರೂ ಕನ್ನಡ ನಾಡು-ನುಡಿ, ನೆಲ, ಜಲ ಇವುಗಳ ಬಗ್ಗೆ ಗೌರವವನ್ನು ಹೊಂದಿರಬೇಕು. ಕನ್ನಡ ಭಾಷೆಯನ್ನು ನಾವು ಕಲಿಯಬೇಕು ಬೇರೆಯವರಿಗೂ ಕಲಿಸಬೇಕು ಎಂದರು. ನಾಡಿನ ವಿವಿಧ ಭಾಗಗಳಲ್ಲಿ ತಮ್ಮದೇ ಆದ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸೇವೆಯನ್ನು ಸಲ್ಲಿಸುತ್ತಿರುವ ಸಾಧಕರುಗಳನ್ನು ಗುರುತಿಸಿ ಅವರುಗಳನ್ನು ಅಭಿನಂದಿಸುವ ಕೆಲಸ ಮಾಡಿರುವುದು ಅಭಿನಂದನಾರ್ಹ ಕಾರ್ಯವಾಗಿದೆ ಎಂದರು. ಕರ್ನಾಟಕ ಪ್ರೆಸ್‌ಕ್ಲಬ್‌ನ ಕೃಷ್ಣರಾಜನಗರ ತಾಲ್ಲೂಕು ಘಟಕವು ಕನ್ನಡದ ಕೆಲಸವನ್ನು ಮಾಡುವುದರ ಜೊತೆಗೆ ವರ್ಷವಿಡೀ ಹತ್ತಾರು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು ಕೆ.ಆರ್.ನಗರ ತಾಲೂಕು ಘಟಕವು ಇತರೆ ಸಂಘಟನೆಗಳಿಗೆ ಮಾದರಿಯಾಗಿದೆ ಎಂದರು.
ಕರ್ನಾಟಕ ಪ್ರೆಸ್‌ಕ್ಲಬ್‌ನ ಕೃಷ್ಣರಾಜನಗರ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಟಿ.ಮೋಹನ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ರಾಜ್ಯೋತ್ಸವ ಕಾರ್ಯಕ್ರಮವನ್ನು ಕೇವಲ ಹೆಸರಿಗೆ ಮಾತ್ರ ಆಚರಿಸದೆ ಅರ್ಥಪೂರ್ಣವಾಗಿ ಎಲ್ಲರೂ ಒಂದುಗೂಡಿ ಆಚರಣೆ ಮಾಡಬೇಕೆಂದರು. ಕನ್ನಡದ ಹೆಸರಿನಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಸೇವಾಕಾರ್ಯಗಳನ್ನು ನಡೆಸಬೇಕು ಎಂದರು. ಈ ನಿಟ್ಟಿನಲ್ಲಿ ಕರ್ನಾಟಕ ಪ್ರೆಸ್‌ಕ್ಲಬ್‌ನ ಕೃಷ್ಣರಾಜನಗರ ತಾಲ್ಲೂಕು ಘಟಕವು ೨೦೨೩ನೇ ಸಾಲಿನಲ್ಲಿ ತಾಲೂಕಿನ ವಿವಿಧ ಭಾಗಗಳಲ್ಲಿ ಮೂರು ಭಾರಿ ಉಚಿತ ಕಣ್ಣಿನ ತಪಾಸಣಾ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ, ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಪೌರಕಾರ್ಮಿಕರ ದಿನಾಚರಣೆ ಹಾಗೂ ಪೌರಕಾರ್ಮಿಕರಿಗೆ ಸನ್ಮಾನ, ಸಾಧಕರು ಹಾಗೂ ಗಣ್ಯರುಗಳಿಗೆ ಸನ್ಮಾನ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಪ್ರೌಢಾಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳ ಆಯೋಜನೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ, ವಿಶ್ವ ಮಹಿಳಾ ದಿನಾಚರಣೆ ಮತ್ತು ಸಾಧಕ ಮಹಿಳೆಯರಿಗೆ ಸನ್ಮಾನ, ಪತ್ರಿಕಾ ದಿನಾಚರಣೆ, ಪ್ರತಿಭಾ ಪುರಸ್ಕಾರ, ಸುವರ್ಣ ಕರ್ನಾಟಕ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಮತ್ತು ವಿವಿಧ ಕ್ಷೇತ್ರಗಳ ನಾಡಿನ ಸಾಧಕರುಗಳಿಗೆ ಅಭಿನಂದನಾ ಸಮಾರಂಭ, ೨೦೨೩ನೇ ಸಾಲಿನ ಕ್ಯಾಲೆಂಡರ್ ಮತ್ತು ಡೈರಿ ಬಿಡುಗಡೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದೆ ಎಂದರು.
ಸಮಾರಂಭದಲ್ಲಿ ಶಿಲ್ಪಕಲಾ ಕ್ಷೇತ್ರದ ಕಾಸರಗೂಡಿನ ಡಾ.ಪ್ರವೀಣ್ ಕುಮಾರ್ ಪುಂಚಿತಾಯ, ಶಿಕ್ಷಣ ಕ್ಷೇತ್ರದ ಚಿತ್ರದುರ್ಗ ತಾಲೂಕಿನ ಕವಾಡಿಗರ ಹಟ್ಟಿಯ ಕೆ.ಎನ್.ಮಹೇಶ್, ಪಿರಿಯಾಪಟ್ಟಣ ತಾಲೂಕಿನ ದೇಪೂರದ ಡಿ.ಕೆ.ರಮೇಶ್, ಸಾಲಿಗ್ರಾಮ ತಾಲೂಕಿನ ಚಿಕ್ಕಹನಸೋಗೆ ಗ್ರಾಮದ ಸಿ.ಜೆ.ಮಂಜುನಾಥ, ಉದ್ಯಮ ಕ್ಷೇತ್ರದ ಶ್ರೀರಂಗಪಟ್ಟಣ ತಾಲೂಕಿನ ಕಿರಂಗೂರಿನ ಸೋಮಶೇಖರ್, ವೈದ್ಯಕೀಯ ಕ್ಷೇತ್ರದ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಯ ಅರವಳಿಕೆ ತಜ್ಞರಾದ ಡಾ.ಹೆಚ್.ಕೆ.ಸುಮ, ರಂಗಭೂಮಿ ಕ್ಷೇತ್ರದ ಗಂಗಾವತಿಯ ಶೇಖರ್ ತೆಗ್ಗಿ, ಎನ್.ಆರ್.ರಾಯಭಾಗಿ, ಮಂಡ್ಯದ ಕೆ.ಸಿದ್ದರಾಮು, ಭರತನಾಟ್ಯ ಕ್ಷೇತ್ರದ ಹೊಸಪೇಟೆಯ ಪಿ.ಧನಲಕ್ಷ್ಮೀ, ಚಿತ್ರಕಲಾ ಕ್ಷೇತ್ರದ ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಸಂಸ್ಥೆಯ ಡಾ.ದೇವರಾಜು ಮಾರ್ಕಾಲು, ಗ್ರಾಫಿಕ್ ಚಿತ್ರಕಲಾ (ಮುದ್ರಣ) ಕ್ಷೇತ್ರದ ಎಂ.ಸಿ.ಕೋಮಲ, ಸಮಾಜ ಸೇವಾ ಕ್ಷೇತ್ರದ ಮಳವಳ್ಳಿ ತಾಲೂಕಿನ ಕಲ್ಲಾರೆಪುರದ ಸೌಭಾಗ್ಯ ಸಿದ್ದರಾಜು, ಸಾಹಿತ್ಯ ಕ್ಷೇತ್ರದ ಗಂಗಾವತಿಯ ಶರಣಪ್ಪ ತಳ್ಳಿ ಕುಪ್ಪಿಗುಡ್ಡ, ಧಾರ್ಮಿಕ ಕ್ಷೇತ್ರದ ಮದ್ದೂರು ತಾಲೂಕಿನ ಉಪ್ಪಿನಕೆರೆಯ ಡಾ.ಕೆ.ಪಿ.ನಾಗೇಂದ್ರಶಾಸ್ತ್ರಿ ಹಾಗೂ ಟಿ.ನರಸೀಪುರದ ಡಾ.ಬೋಳಪ್ಪ ಗುರೂಜಿ, ಸ್ವಯಂಸೇವಾ ಸಂಸ್ಥೆ ಹಾಗೂ ಡೆವಲಪರ್‍ಸ್ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದಾವಣಗೆರೆಯ ನಳಿನಿತಿಪ್ಪೇಶ್ ಮತ್ತು ಮೈಸೂರಿನ ಜ್ಯೋತಿ ಸೆಕ್ಯೂರಿಟಿ ಸರ್ವಿಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆ.ಪಿ.ಪುಟ್ಟಸ್ವಾಮಿ ಅವರುಗಳನ್ನು ವಿಶೇಷವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು. ಕರ್ನಾಟಕ ಪ್ರೆಸ್‌ಕ್ಲಬ್‌ನ ಅಧ್ಯಕ್ಷ ಬಿಚ್ಚುಗತ್ತಿ ಖಾಜಾಹುಸೇನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಚಲನಚಿತ್ರ ನಟಿ ಕು.ಧರಣಿ, ಕರ್ನಾಟಕ ಪ್ರೆಸ್‌ಕ್ಲಬ್‌ನ ಖಜಾಂಚಿ ಎಂ.ದಯಾನಂದ ಅವರುಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರ್ವಹಣೆಯನ್ನು ಮೈಸೂರಿನ ಅನಂತಗೀತ ವಿದ್ಯಾಲಯದ ಉಪ ಪ್ರಾಂಶುಪಾಲ ಹೆಚ್.ಪಿ.ಲೋಕೇಶ್, ಸಾಲಿಗ್ರಾಮದ ಗ್ರಾಫಿಕ್ ಚಿತ್ರಕಲಾವಿದ ಎಸ್.ಜೆ.ಗಣೇಶ ನಡೆಸಿಕೊಟ್ಟರು. ಪ್ರಾರ್ಥನೆಯನ್ನು ಶ್ರೀರಂಗಪಟ್ಟಣದ ವಿವೇಕಪ್ರಿಯ ಮಾಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರೆಸ್‌ಕ್ಲಬ್‌ನ ಕೃಷ್ಣರಾಜನಗರ ತಾಲ್ಲೂಕು ಘಟಕದ ಉಪಾಧ್ಯಕ್ಷ ಸಿ.ವೈ.ಅಭಿಲಾಷ್, ಪ್ರಧಾನ ಕಾರ್ಯದರ್ಶಿ ಕೆ.ಎನ್.ತುಳಸೀಕುಮಾರ್, ಖಜಾಂಚಿ ಎಂ.ಪಿ.ಮಂಜುನಾಥ, ಸಹಕಾರ್ಯದರ್ಶಿ ಎಸ್.ಲೋಕೇಶ್, ಸಂಘಟನಾ ಕಾರ್ಯದರ್ಶಿ ಕೆ.ಆರ್.ಶ್ಯಾಮ್‌ಸುಂದರ್, ಸಂಚಾಲಕರುಗಳಾದ ಎಂ.ಎಸ್.ನರಸಿಂಹ, ಎಸ್.ಬಿ.ಬಸವರಾಜು, ಜ್ಞಾನಾಮೃತ ಸೇವಾ ಸಂಸ್ಥೆಯ ಅಧ್ಯಕ್ಷ ಹೆಚ್.ಕೆ.ನಾಗೇಶ್, ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕು ಶ್ರೀ ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ಕಾಟ್ನಾಳು ಮಹದೇವ, ಶಿಕ್ಷಕ ಎನ್.ಜೆ.ಸ್ವಾಮಿ, ಮುಖಂಡರುಗಳಾದ ಟಿ.ಎನ್.ಯೋಗೇಶ್ ಕುಮಾರ್, ನಾಗರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.