ಮೈಸೂರು: ಸುಸಂಸ್ಕೃತ ಸಮಾಜ ಕಟ್ಟಲು ನಮ್ಮ ಮಕ್ಕಳಿಗೆ ಉತ್ತಮ ವಿದ್ಯೆ ಮತ್ತು ಸಂಸ್ಕಾರವನ್ನು ನೀಡಬೇಕು ಎಂದು ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ನಗರದ ಕಲಾಮಂದಿರದಲ್ಲಿ ಸದ್ವಿದ್ಯಾ ಶಿಕ್ಷಣ ಸಂಸ್ಥೆಗಳು ಸೋಮವಾರ ಆಯೋಜಿಸಿದ್ದ ಶತೋತ್ತರ-ಸುವರ್ಣ-ರಜತ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮೈಸೂರು ಅಂತಹ ಕಲೆ, ಆಚಾರ, ಸಂಸ್ಕೃತಿ, ವಿದ್ಯೆ ಇವೆಲ್ಲದರಲ್ಲೂ ಮುನ್ನಡೆ ಸಾಧಿಸಿರುವ ಕ್ಷೇತ್ರವಾಗಿದೆ. ಮಕ್ಕಳಿಗೆ ಉತ್ತಮ ವಿದ್ಯೆ ನೀಡುತ್ತಿದೆ ಎಂದರು.
ಒಬ್ಬ ವ್ಯಕ್ತಿಯ ಭವಿಷ್ಯ ಏನು ಎನ್ನುವುದನ್ನು ತೀರ್ಮಾನಿಸಲು ಅವನ ಕುಂಡಲಿಯನ್ನು ಪರಿಶೀಲಿಸುತ್ತಾರೆ. ವ್ಯಕ್ತಿಯ ಕುಂಡಲಿಯಲ್ಲಿ ಯಾವ ಯಾವ ಗ್ರಹ, ನಕ್ಷತ್ರಗಳು ಎಲ್ಲಿ ಎಲ್ಲಿ ಇವೆ ಎಂದು ಗುರುತಿಸಿಕೊಂಡು, ಆ ಲೆಕ್ಕಾಚಾರದಲ್ಲಿ ವ್ಯಕ್ತಿಯ ಭವಿಷ್ಯವನ್ನು ಹೀಗೆ ಎಂದು ತೀರ್ಮಾನಿಸಲಾಗುತ್ತದೆ. ಆದರೆ, ಒಂದು ಸಮಾಜದ ಭವಿಷ್ಯವನ್ನು ತಿರ್ಮಾನಿಸಲು ಕುಂಡಲಿ ಇಲ್ಲ. ಗ್ರಹ, ನಕ್ಷತ್ರಗಳು ಇಲ್ಲ. ಸಮಾಜದ ಮಕ್ಕಳ ಕಣ್ಣುಗಳು ಗ್ರಹ, ನಕ್ಷತ್ರಗಳಂತೆ ಹೊಳೆಯುತ್ತಿದ್ದರೆ ಆ ಸಮಾಜಕ್ಕೆ ಭವಿಷ್ಯ ಇದೆ ಎಂದು ಅರ್ಥ. ಆ ಮಕ್ಕಳ ಮುಖದಲ್ಲಿ ಕಾಂತಿ ಇಲ್ಲ ಎಂದರೆ ಆ ಸಮಾಜಕ್ಕೆ ಭವಿಷ್ಯ ಇಲ್ಲ ಎಂದು ಅರ್ಥ ಎಂದ ಅವರು, ಸದ್ವಿದ್ಯಾ ಸಂಸ್ಥೆ ಮಕ್ಕಳಿಗೆ ಶಿಕ್ಷಣ, ಆಚಾರ, ವಿಚಾರ, ಸಂಸ್ಕೃತಿ ತುಂಬಿಸುತ್ತಿದೆ. ಇಲ್ಲಿನ ಮಕ್ಕಳ ಆತ್ಮಸ್ಥೈರ್ಯ ಗಮನಿಸಿದರೆ ನಮ್ಮ ಸಮಾಜಕ್ಕೆ ಭವಿಷ್ಯ ಇದೆ ಎಂದು ತೀರ್ಮಾನಿಸಬಹುದಾಗಿದೆ ಎಂದರು.
ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಸದ್ವಿದ್ಯಾ ಸಂಸ್ಥೆಯ ಶಿಕ್ಷಣ ಸೇವೆ ಅರಿತು ಕಾರ್ಯಕ್ರಮ ಬಂದಿದ್ದೇನೆ.ಜಗತ್ತಿಗೆ ಜ್ಞಾನ ನೀಡಿದ ದೇಶ ಇದೇ ಎಂದರೆ ಅದು ಭಾರತ. ಇದನ್ನು ನಾವು ಮಾತ್ರ ಅಲ್ಲ ಜಗತ್ತಿನ ಎಲ್ಲ ಜನರು ಮತ್ತು ದೇಶದವರು ಒಪ್ಪಿಕೊಳ್ಳುತ್ತಾರೆ ಎಂದರು.
ಜಗತ್ತಿನ ದೊಡ್ಡ ಸಂಪತ್ತು ಮಾನವ ಸಂಪನ್ಮೂಲವಾಗಿದೆ. ಮಾನವ ಸಂಪನ್ಮೂಲ ಉಪಯೋಗಿಸಿಕೊಳ್ಳು ಶಿಕ್ಷಣ ಒಂದೇ ದಾರಿ. ಇದರ ಮಹತ್ವ ತಿಳಿದು ಸದ್ವಿದ್ಯಾ ಸಂಸ್ಥೆ ಅಸ್ವಸ್ಥತೆಕ್ಕೆ ಬಂದು ಶಿಕ್ಷಣ ನೀಡುತ್ತಿದೆ ಎಂದರು. ಮಹಾನ್ ಚೇತನ ವಿವೇಕಾನಂದ ಸ್ಪರ್ಶ ಸಂಸ್ಥೆಗೆ ಇದೆ ಎಂದರು.
ಇದೇ ವೇಳೆ ಸಂಸ್ಥೆಯ ಏಳಿಗೆಗೆ ದುಡಿದ ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದವರನ್ನು ಸನ್ಮಾನಿಸಲಾಯಿತು. ಸ್ವಾಮಿ ಮುಕ್ತಿದಾನಂದ ಮಹಾರಾಜ್, ಸದ್ವಿದ್ಯಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ.ಕೆ.ವಿ.ಗೋಪಾಲಾಚಾರ್, ಉಪಾಧ್ಯಕ್ಷ ಸಿ.ಆರ್.ನಾಗರಾಜ್, ಗೌರವ ಕಾರ್ಯದರ್ಶಿ ಪ್ರೊ.ಎಂ.ಎಸ್.ಕೆ.ನರಹರಿಬಾಬು, ಸಹ ಕಾರ್ಯದರ್ಶಿ ಪ್ರೊ.ಕೆ.ಎಸ್.ಹಿರಿಯಣ್ಣ, ಆಡಳಿತ ಮಂಡಳಿ ಸದಸ್ಯರಾದ ಎಂ.ಡಿ.ಗೋಪಿನಾಥ್, ಆರ್.ಎಸ್.ಪ್ರಸನ್ನ, ಡಾ.ನಳಿನಿ ಚಂದರ್, ಎಸ್.ಆರ್.ಭಾಗ್ಯಶ್ರೀ ಇದ್ದರು.