ಮೈಸೂರು: ಪೌರ ಕಾರ್ಮಿಕರು ತಮ್ಮ ಮಕ್ಕಳನ್ನು ಪೌರ ಸೇವೆ ನೌಕರರಿಗಷ್ಟೇ ಸೀಮಿತಗೊಳಿಸದೆ ಅವರಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಪಾಲಿಕೆ ಸದಸ್ಯ ಮಾ.ವಿ.ರಾಮ್ ಪ್ರಸಾದ್ ಅಭಿಪ್ರಾಯಪಟ್ಟರು.
ಚಾಮುಂಡಿಪುರಂ ವೃತ್ತದಲ್ಲಿರುವ ತಗಡೂರು ರಾಮಚಂದ್ರರಾವ್ ಉದ್ಯಾನವನದಲ್ಲಿ ಚಾಮುಂಡೇಶ್ವರಿ ವಿದ್ಯುತ್ ನಿಗಮ ನಿಯಮತಿ ಅಧಿಕಾರಿಗಳ ವರ್ಗ ಹಾಗೂ ನೌಕರರ ಸಂಘ ಮತ್ತು ಚಾಮುಂಡೇಶ್ವರಿ ಕಾರು ಮಾಲೀಕರ ಮತ್ತು ಚಾಲಕರ ಸಂಘ ಹಾಗೂ ರವಿ ಸ್ನೇಹ ಬಳಗದ ವತಿಯಿಂದ ಪೌರ ಕಾರ್ಮಿಕರ ಮಕ್ಕಳಿಗೆ ಪುಸ್ತಕ ವಿತರಿಸಿ ಮಾತನಾಡಿದ ಅವರು, ಮಳೆ ಚಳಿ ಗಾಳಿ ಲೆಕ್ಕಿಸದೆ ನಗರದ ಸ್ವಚ್ಛತೆ ಕಾರ್ಯದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರ ಕರ್ತವ್ಯ ನಿಷ್ಠೆ ಶ್ಲಾಘನೀಯ ನಗರದ ಸ್ವಚ್ಛತೆ ಕಾಪಾಡಲು ಶ್ರಮಿಸುತ್ತಿರುವ ಪೌರ ಕಾರ್ಮಿಕರು ತಾವು ವಾಸಿಸುವ ಪರಿಸರದ ಸ್ವಚ್ಛತೆ ಕಾಪಾಡಿಕೊಳ್ಳುವುದರೊಂದಿಗೆ ತಮ್ಮ ವೈಯಕ್ತಿಕ ಶುಚಿತ್ವದ ಬಗ್ಗೆಯೂ ಗಮನ ಹರಿಸಬೇಕು. ಪೌರ ಕಾರ್ಮಿಕರು ತಮ್ಮ ಮಕ್ಕಳನ್ನು ಪೌರ ಸೇವೆ ನೌಕರರಿಗಷ್ಟೇ ಸೀಮಿತಗೊಳಿಸದೆ ಅವರಿಗೆ ಉತ್ತಮ ಶಿಕ್ಷಣ ನೀಡಿ ಉನ್ನತ ಹುದ್ದೆಗಳನ್ನು ಪಡೆದುಕೊಳ್ಳುವಂತೆ ಪ್ರೇರೇಪಿಸಬೇಕು. ಸರ್ಕಾರದಿಂದ ಮತ್ತು ಪಾಲಿಕೆಯಿಂದ ದೊರೆಯುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಬದುಕನ್ನು ಹಸನಾಗಿಸಿಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೆ.ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ನಿವೃತ್ತ ಶಿಕ್ಷಕ ಮಹದೇವಸ್ವಾಮಿ, ಅಪೂರ್ವ ಸುರೇಶ್, ಅರಿವು ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ಕಶ್ಯಪ್, ಕಾಂಗ್ರೆಸ್ ಯುವ ಮುಖಂಡ ರವಿಚಂದ್ರ, ಸಂಘದ ಪದಾಧಿಕಾರಿಗಳಾದ ರವಿ, ಸುಬ್ರಮಣ್ಯ, ದೀಪಕ್ ಸೇರಿದಂತೆ ಹಲವರು ಭಾಗವಹಿಸಿದ್ದರು.