ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಿ ಉತ್ತಮ ಕ್ರೀಡಾಪಟುಗಳಾದರೆ ರಾಜ್ಯ ಮತ್ತು ರಾಷ್ಟç ಮಟ್ಟದಲ್ಲೂ ಉದ್ಯೋಗ ಪಡೆಯಲು ಹೆಚ್ಚು ಅವಕಾಶಗಳಿವೆ. ಆದ್ದರಿಂದ ತಪ್ಪದೆ ಒಂದಲ್ಲ ಒಂದು ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಕೆ.ಆರ್.ನಗರ ಪಟ್ಟಣದ ಕೃಷ್ಣರಾಜೇಂದ್ರ ಕ್ರೀಡಾಂಗಣದಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ವಿದ್ಯಾರ್ಥಿಗಳು ಓದಿನಷ್ಟೇ ಕ್ರೀಡೆಗೂ ಪ್ರಾಮುಖ್ಯತೆ ನೀಡಿದಾಗ ಎಲ್ಲಾ ವಿಭಾಗದಲ್ಲೂ ಯಶಸ್ಸು ಕಾಣಲು ಸಾಧ್ಯ ಎಂದರು.
ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಆರೋಗ್ಯವಂತರಾಗಿರುವುದರ ಜತೆಗೆ ಸದೃಢ ಶರೀರ ಹೊಂದಲು ಸಾಧ್ಯವಾಗಲಿದೆ. ಅದಕ್ಕಾಗಿ ಕ್ರೀಡೆಯಲ್ಲಿ ಭಾಗವಹಿಸಬೇಕೆಂದು ಸಲಹೆ ನೀಡಿದ ಶಾಸಕರು ಎಲ್ಲಾ ಶಾಲೆಗಳಲ್ಲೂ ಕ್ರೀಡಾ ಚಟುವಟಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಎಲ್ಲಾ ಶಾಲೆಗಳಿಗೂ ಸೂಚನೆ ನೀಡಬೇಕೆಂದು ತಿಳಿಸಿದರು.
ಕ್ರೀಡಾ ಪಟುಗಳಿಗೆ ಅನುಕೂಲ ಕಲ್ಪಿಸುವ ಉದ್ಧೇಶದಿಂದ ಕ್ರೀಡಾಂಗಣದಲ್ಲಿ ಯುವಜನ ಸಬಲೀಕರಣ ಇಲಾಖೆಯ ಷಟಲ್ ಬ್ಯಾಡ್‌ಮಿಂಟನ್ ನಿರ್ಮಾಣ ಮಾಡುತ್ತಿದ್ದು, ಯುವ ಜನತೆಗೆ ಅನುಕೂಲವಾಗುವಂತಹ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಕ್ರೀಡಾ ಕ್ಷೇತ್ರಕ್ಕೆ ವಿಶೇಷ ಅನುದಾನ ತರಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕೃಷ್ಣಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸ್ವಾಮಿಗೌಡ, ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ಬಿ.ಕುಮಾರಸ್ವಾಮಿ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಲಕ್ಷ್ಮಿಕಾಂತ , ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಕೆ.ಜಗದೀಶ್, ಗ್ರೇಡ್-೧ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಟಿ.ಗೋವಿಂದರಾಜು, ಭೇರ್ಯ ದಯಾನಂದ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಹೆಚ್.ಎಸ್.ಸ್ವಾಮಿ, ಮುಖ್ಯಶಿಕ್ಷಕ ಸಿ.ಸುರೇಶ್, ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣೇಗೌಡ, ಸಹಶಿಕ್ಷಕ ದೊಡ್ಡಮೊಗೇಗೌಡ ಹಾಜರಿದ್ದರು.