Friday, April 18, 2025
Google search engine

Homeರಾಜ್ಯಉದ್ಯೋಗದಲ್ಲಿ ಸ್ಥಳೀಯರಿಗೆ ಹೆಚ್ಚಿನ ಅವಕಾಶ ನೀಡಿ: ಡಿಸಿಎಂ ಡಿ.ಕೆ.ಶಿವಕುಮಾರ್

ಉದ್ಯೋಗದಲ್ಲಿ ಸ್ಥಳೀಯರಿಗೆ ಹೆಚ್ಚಿನ ಅವಕಾಶ ನೀಡಿ: ಡಿಸಿಎಂ ಡಿ.ಕೆ.ಶಿವಕುಮಾರ್

ಚಾಮರಾಜನಗರ: ಜಿಲ್ಲಾ ಸಚಿವರ ಮನವಿಯಂತೆ ಉದ್ಯೋಗದಲ್ಲಿ ನೀವು ಸ್ಥಳೀಯ ಜನರಿಗೆ ಹೆಚ್ಚಿನ ಅವಕಾಶಗಳನ್ನು ನೀಡಬೇಕು. ಚಾಮರಾಜನಗರದ ಜನ ಬಹಳ ಬದ್ಧತೆ ಹೊಂದಿರುವ ಉತ್ತಮ ಜನರಿದ್ದಾರೆ. ಅವರಿಗೆ ನೀವು ಅವಕಾಶ ಕಲ್ಪಿಸಿಕೊಡಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಚಾಮರಾಜನಗರದಲ್ಲಿ ಎಲ್ಇಪಿ ಬ್ಯಾಟರಿ ಉತ್ಪಾದನೆ ಘಟಕ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಕಂಪನಿಯವರು ಬಹಳ ದೊಡ್ಡ ಸಾಹಸಕ್ಕೆ ಕೈ ಹಾಕಿದ್ದು, ಚಾಮರಾಜನಗರದಲ್ಲಿ ಈ ಬ್ಯಾಟರಿ ಉತ್ಪಾದನಾ ಘಟಕ ಸ್ಥಾಪನೆಗೆ ಮುಂದಾಗಿರುವುದಕ್ಕೆ ಅವರಿಗೆ ಉತ್ತೇಜನ ನೀಡಲು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂದರು.

ಗಾಳಿ ಮತ್ತು ಸೌರ ವಿದ್ಯುತ್ ಉತ್ಪಾದನೆ ಹಾಗೂ ಶೇಖರಣೆ ಸುಲಭದ ಕೆಲಸವಲ್ಲ. ಈ ಕೆಲಸಕ್ಕೆ ನೀವು ಮುಂದಾಗಿರುವುದು ಅತ್ಯುತ್ತಮ ನಿರ್ಧಾರವಾಗಿದೆ. ನಿಮಗೆ ಅಗತ್ಯವಾದ ಎಲ್ಲ ರೀತಿಯ ಸಹಕಾರವನ್ನು ಸರ್ಕಾರ ನೀಡಲಿದೆ. ನಿಮ್ಮ ಈ ಪ್ರಯತ್ನ ಯಶಸ್ವಿಯಾಗಲಿ ಎಂದು ಹಾರೈಸಿದರು.

ಈ ಭಾಗದ ಜನ ಕೂಡ ಸಾವಿರಾರು ಕೋಟಿ ಬಂಡವಾಳ ಹಾಕಿ ಉದ್ಯೋಗ ಸೃಷ್ಟಿಸುತ್ತಿರುವ ಈ ಕಂಪನಿಯವರಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ನಾನು ಇಂಧನ ಸಚಿವನಾದಾಗ, ಈ ಇಲಾಖೆ ಜವಾಬ್ದಾರಿ ಯಾಕೆ ತೆಗೆದುಕೊಂಡಿದ್ದೀಯಾ? ಈ ಇಲಾಖೆಯಲ್ಲಿ ಲೋಡ್ ಶೆಡ್ಡಿಂಗ್ ಸಮಸ್ಯೆ ಇದೆ ಈ ಇಲಾಖೆ ಬೇಡ ಎಂದು ಸಲಹೆ ನೀಡಿದ್ದರು. ಆದರೆ ಯಾವುದು ಮಾಡಲು ಅಸಾಧ್ಯವೋ ಅದನ್ನು ಸಾಧಿಸಿ ತೋರಿಸುವುದು ನನ್ನ ಹಂಬಲ ಹಾಗೂ ಛಲವಾಗಿದೆ. ನಾನು ಇಲಾಖೆ ಜವಾಬ್ದಾರಿ ತೆಗೆದುಕೊಂಡಾಗ ರಾಜ್ಯದಲ್ಲಿ 10 ಸಾವಿರ ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತಿತ್ತು. ನಾನು ಅಧಿಕಾರ ಬಿಟ್ಟಾಗ ಇದರ ಪ್ರಮಾಣ 23 ಸಾವಿರ ಮೆ.ವ್ಯಾಟ್ ಗೆ ಏರಿಕೆಯಾಗಿತ್ತು. ನಮ್ಮ ಸರ್ಕಾರ ಇನ್ನು 5 ಸಾವಿರ ಮೆ.ವ್ಯಾಟ್ ವಿದ್ಯುತ್ ಉತ್ಪಾದನೆಗೆ ಕಾರ್ಯಕ್ರಮ ರೂಪಿಸಿದೆ ಎಂದು ತಿಳಿಸಿದರು.

ಇಡೀ ವಿಶ್ವದಲ್ಲೇ ಗಮನ ಸೆಳೆದ ಸೋಲಾರ್ ಪಾರ್ಕ್ ಅನ್ನು ತುಮಕೂರಿನ ಪಾವಗಡದಲ್ಲಿ ನಿರ್ಮಾಣ ಮಾಡಿದೆವು. ರೈತರಿಂದ ಜಮೀನು ಖರೀದಿಸದೇ, ಅವರನ್ನು ಪಾರ್ಟ್ನರ್ ಆಗಿ ಮಾಡಿ ಈ ಯೋಜನೆ ಮಾಡಿದ್ದು, ವಿಶ್ವಕ್ಕೆ ಮಾದರಿ ಆಗಿತ್ತು. ಸೂರ್ಯ ಮತ್ತು ಗಾಳಿ ಪ್ರಕೃತಿ ಭಾಗವಾಗಿದ್ದು, ಇವುಗಳನ್ನು ಬಳಸಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಈ ಭಾಗದಲ್ಲೂ ಸೌರಶಕ್ತಿ ಉತ್ಪಾದಿಸುವ ಕೆಲಸ ಯಶಸ್ವಿಗೊಳಿಸಿದ್ದೇವೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular