ಬೆಂಗಳೂರು: ಕರ್ನಾಟಕ ಸರ್ಕಾರದ ಶಕ್ತಿ ಯೋಜನೆ ಮತ್ತು ಕೆಎಸ್ಸಾರ್ಟಿಸಿ ‘ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನಲ್ಲಿ ಎರಡು ಚಾರಿತ್ರಿಕ ದಾಖಲೆಗೆ ಪಾತ್ರವಾಗಿದೆ. ಮಹಿಳೆಯರಿಗೆ ಉಚಿತ ಬಸ್ ಸೇವೆ ನೀಡುವ ಶಕ್ತಿ ಯೋಜನೆಯು 546.10 ಕೋಟಿ ಪ್ರಯಾಣಗಳನ್ನು ದಾಖಲಿಸಿದ್ದು, ಈ ಮೂಲಕ ವಿಶ್ವದ ಗಮನ ಸೆಳೆದಿದೆ.
ಈ ಬಗ್ಗೆ ತನ್ನ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಹಾಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನಲ್ಲಿ ಎರಡು ಚಾರಿತ್ರಿಕ ದಾಖಲೆಗಳೊಂದಿಗೆ ಕರ್ನಾಟಕ ಜಾಗತಿಕ ಮಟ್ಟದಲ್ಲಿ ಮಗದೊಮ್ಮೆ ಛಾಪು ಮೂಡಿಸಿದೆ ಎಂದು ಹೇಳಿದ್ದಾರೆ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ ‘ಶಕ್ತಿ’ ಯೋಜನೆ ಮತ್ತು ವಿಶ್ವದಲ್ಲಿ ಅತಿ ಹೆಚ್ಚು ಪ್ರಶಸ್ತಿ ವಿಜೇತ ರಸ್ತೆ ಸಾರಿಗೆ ನಿಗಮ ಎಂಬ ದಾಖಲೆಗೆ ಕೆಎಸ್ಸಾರ್ಟಿಸಿ ಭಾಜನವಾಗಿದೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದ್ದಾರೆ.
ಶಕ್ತಿ ಯೋಜನೆ ಮೂಲಕ ಮಹಿಳೆಯರು 546.10 ಕೋಟಿ ಉಚಿತ ಪ್ರಯಾಣವನ್ನು ಕೈಗೊಂಡಿದ್ದಾರೆ. ಅದೇರೀತಿ ವಿಶ್ವದಲ್ಲೇ ಅತಿ ಹೆಚ್ಚು ಪ್ರಶಸ್ತಿ ವಿಜೇತ ರಸ್ತೆ ಸಾರಿಗೆ ನಿಗಮ ಎಂಬ ದಾಖಲೆಗೆ ಕೆಎಸ್ಸಾರ್ಟಿಸಿ ಭಾಜನವಾಗಿದೆ. 1997ರಿಂದ ಇಲ್ಲಿಯವರೆಗೆ 464 ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಗೌರವಕ್ಕೆ ಕೆಎಸ್ಸಾರ್ಟಿಸಿ ಪಾತ್ರವಾಗಿದೆ ಎಂದು ಸಿಎಂ ವಿವರಿಸಿದ್ದಾರೆ.
ಈ ಮನ್ನಣೆಗಳು ಎಲ್ಲರನ್ನು ಒಳಗೊಳ್ಳುವ ನೀತಿಯಿಂದ ಏನನ್ನೂ ಸಾಧಿಸಬಹುದು ಎಂಬುದಕ್ಕೆ ಪ್ರತೀಕವಾಗಿದೆ. ನಮ್ಮ ಸರಕಾರವು ಸಾಮಾಜಿಕ ನ್ಯಾಯ, ಮಹಿಳಾ ಸಬಲೀಕರಣ ಮತ್ತು ವಿಶ್ವ ದರ್ಜೆಯ ಸಾರ್ವಜನಿಕ ಸೇವೆ ನೀಡುವಲ್ಲಿ ಬದ್ಧವಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.