ಅಧಿಕಾರಿಗಳು ಹಾಗೂ ಪೊಲೀಸರು ದಾಳಿ ಮಾಡುತ್ತಿದ್ದಂತೆ, ಆರೋಪಿಗಳು ಮದ್ಯ ಹಾಗೂ ದ್ವಿಚಕ್ರವಾಹನಗಳನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ವರದಿ :ಸ್ಟೀಫನ್ ಜೇಮ್ಸ್
ಕಾರವಾರ: ಗೋವಾದಿಂದ ಅಕ್ರಮವಾಗಿ ದೊಡ್ಡ ಪ್ರಮಾಣದ ಮದ್ಯವನ್ನು ಸಾಗಿಸುತ್ತಿದ್ದ ಜಾಲವನ್ನು ಕಾರವಾರದ ಅಬಕಾರಿ ಇಲಾಖೆ ಅಧಿಕಾರಿಗಳು ಭೇದಿಸಿದ್ದು, ಸುಮಾರು ರೂ. 3.62 ಲಕ್ಷ ಮೌಲ್ಯದ ಮದ್ಯ ಮತ್ತು ರೂ. 4 ಲಕ್ಷ ಮೌಲ್ಯದ ಐದು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಆದಾಗ್ಯೂ, ಅಧಿಕಾರಿಗಳನ್ನು ಕಂಡ ತಕ್ಷಣ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಮುಡಗೇರಿ ಡ್ಯಾಮ್ ಹತ್ತಿರ ಕಾರ್ಯಾಚರಣೆ: ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆಗಿಳಿದ ಅಬಕಾರಿ ಇಲಾಖೆಯ ಸಿಬ್ಬಂದಿ ಗುರುವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ತಾಲೂಕಿನ ಮುಡಗೇರಿ ಡ್ಯಾಮ್ ಹತ್ತಿರದ ಅರಣ್ಯ ಪ್ರದೇಶದಲ್ಲಿ ಗಸ್ತು ನಡೆಸಿದರು. ಈ ವೇಳೆ ಐದು ದ್ವಿಚಕ್ರ ವಾಹನಗಳಲ್ಲಿ ಭಾರೀ ಪ್ರಮಾಣದ ಮದ್ಯವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದರು.
ಅಧಿಕಾರಿಗಳು ದಾಳಿ ಮಾಡುತ್ತಿದ್ದಂತೆಯೇ ಮದ್ಯ ಸಾಗಾಟ ಮಾಡುತ್ತಿದ್ದ ಆರೋಪಿಗಳು ವಾಹನಗಳನ್ನು ಅಲ್ಲೇ ಬಿಟ್ಟು ಕಾಲ್ಕಿತ್ತಿದ್ದು, ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.
649 ಲೀಟರ್ ಮದ್ಯ ವಶಕ್ಕೆ: ಈ ಕಾರ್ಯಾಚರಣೆಯಲ್ಲಿ ಅಬಕಾರಿ ಇಲಾಖೆಯು ಒಟ್ಟು 649 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದೆ. ವಶಪಡಿಸಿಕೊಂಡ ಮದ್ಯದ ಅಂದಾಜು ಮೌಲ್ಯ ರೂ. 3,62,350 ಎಂದು ಅಂದಾಜಿಸಲಾಗಿದೆ. ಈ ಪೈಕಿ ಗೋವಾ ಪೆನ್ನಿ 304 ಲೀಟರ್, ಗೋವಾ ಮದ್ಯ 284 ಲೀಟರ್, ಬಿಯರ್ 60 ಲೀಟರ್. ಇನ್ನೂ ಮದ್ಯ ಸಾಗಾಟಕ್ಕೆ ಬಳಸಿದ್ದ ರೂ. 4,00,000 ಮೌಲ್ಯದ ಐದು ದ್ವಿಚಕ್ರ ವಾಹನಗಳನ್ನೂ ಅಬಕಾರಿ ಇಲಾಖೆ ವಶಕ್ಕೆ ಪಡೆದಿದೆ. ಇದರಿಂದಾಗಿ, ವಶಕ್ಕೆ ಪಡೆದ ಮದ್ಯ ಮತ್ತು ವಾಹನಗಳ ಒಟ್ಟು ಮೌಲ್ಯ ರೂ. 7,62,350 ಆಗಿದೆ ಎಂದು ಅಬಕಾರಿ ಇಲಾಖೆ ಸ್ಪಷ್ಟಪಡಿಸಿದೆ. ಪರಾರಿಯಾಗಿರುವ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯವನ್ನು ಮುಂದುವರೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



