ವಾಷಿಂಗ್ಟನ್ : ಅಮೆರಿಕ ದೇಶ ಶ್ರೀಮಂತ ವಿದೇಶಿಯರಿಗೆ ʼಗೋಲ್ಡ್ ಕಾರ್ಡ್ʼ ಪರಿಚಯಿಸಲು ಮುಂದಾಗಿದೆ. ಈ ಕುರಿತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆಯನ್ನು ಮಾಡಿದ್ದು, ವಿಶ್ವದ ಶ್ರೀಮಂತ ವಲಸಿಗರಿಗೆ ಅಮೆರಿಕ ಆಶ್ರಯ ನೀಡಲು ಯೋಜಿಸುತ್ತಿರುವುದಾಗಿ ಹೇಳಿದ್ದಾರೆ.
ʼಗೋಲ್ಡ್ ಕಾರ್ಡ್ ಪಡೆಯಲು ಐದು ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 43 ಕೋಟಿ 54 ಲಕ್ಷ ಶುಲ್ಕ ಪಾವತಿಸಬೇಕಾಗುತ್ತದೆ. ಈ ಕಾರ್ಡ್ ಪಡೆದ ಜನರಿಗೆ ಅಮೆರಿಕದಲ್ಲಿ ವಾಸಿಸುವ ಮತ್ತು ಕೆಲಸ ಮಾಡುವ ಹಕ್ಕು ದೊರೆಯಲಿದೆʼ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಟ್ರಂಪ್ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಮಾತನಾಡಿ, ಗೋಲ್ಡ್ ಕಾರ್ಡ್ ಅಮೆರಿಕದ ಶಾಶ್ವತ ನಿವಾಸಿಗಳಾಗಲು ಅನುವು ಮಾಡಿಕೊಡುವ ಅಸ್ತಿತ್ವದಲ್ಲಿರುವ EB-5 ವಲಸೆ ಹೂಡಿಕೆದಾರರ ವೀಸಾ ಯೋಜನೆಗೆ ಪರ್ಯಾಯವಾಗಲಿದೆ ಎಂದು ಹೇಳಿದ್ದಾರೆ.
ʼಗೋಲ್ಡ್ ಕಾರ್ಡ್ʼ ಸ್ವಲ್ಪಮಟ್ಟಿಗೆ ಹಸಿರು ಕಾರ್ಡ್‌ನಂತಿದೆ. ಆದರೆ ಮತ್ತಷ್ಟು ನವೀಕರಣದೊಂದಿಗೆ ಬರಲಿದೆ. ಇದು ಜನರಿಗೆ ಅಮೆರಿಕದ ಪೌರತ್ವದ ಹಾದಿಯನ್ನು ಮತ್ತಷ್ಟು ಸಲಭಗೊಳಿಸಲಿದೆ. 10 ಲಕ್ಷ ಕಾರ್ಡ್‌ಗಳನ್ನು ಮಾರಾಟ ಮಾಡುವುದರಿಂದ ನಾವು 5 ಟ್ರಿಲಿಯನ್ ಡಾಲರ್ ಗಳಿಸಬಹುದು. ಬೇಡಿಕೆಯು ನಿರೀಕ್ಷೆಗಳನ್ನು ಮೀರಿದರೆ ಇನ್ನೂ ಹೆಚ್ಚಿನ ಗಳಿಕೆ ಸಾಧ್ಯವಾಗಲಿದೆ. ಇದರಿಂದ ರಾಷ್ಟ್ರೀಯ ಸಾಲವನ್ನು ತ್ವರಿತವಾಗಿ ತೀರಿಸಲು ಸಹಾಯ ಮಾಡಲಿದೆʼ. ರಷ್ಯಾದಿಂದ ಹಿಡಿದು ಭಾರತದ ಪ್ರಭಾವಿ ಉದ್ಯಮಿಗಳವರೆಗೆ ಶ್ರೀಮಂತ ವ್ಯಕ್ತಿಗಳು ʼಗೋಲ್ಡ್ ಕಾರ್ಡ್ʼ ಖರೀದಿದಾರರಲ್ಲಿರಬಹುದು ಎಂದು ಟ್ರಂಪ್ ಹೇಳಿದ್ದಾರೆ.