ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧಿತ ನಟಿ ರನ್ಯಾ ರಾವ್ ಮತ್ತು ಉದ್ಯಮಿ ತರುಣ್ ರಾಜು ಜಾಮೀನು ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ಪೂರ್ಣಗೊಂಡಿದ್ದು, ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ನೇತೃತ್ವದ ಪೀಠ ತೀರ್ಪು ಕಾಯ್ದಿರಿಸಿದೆ. ರನ್ಯಾ ಪರ ವಕೀಲರು, ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ನಿಯಮ ಉಲ್ಲಂಘನೆ ಮಾಡಿ ವಿಮಾನ ನಿಲ್ದಾಣ ಮತ್ತು ಮನೆಯಲ್ಲಿ ಶೋಧ ನಡೆಸಿದ್ದಾರೆ ಎಂದು ಆಕ್ಷೇಪಿಸಿದರು. ಅಕ್ರಮವಾಗಿ ಜಪ್ತಿ ಮಾಡಲಾದ ಚಿನ್ನ ಮತ್ತು ನಗದು ವಿರುದ್ಧ ದಾಖಲೆ ಇಲ್ಲ, ರನ್ಯಾ 46 ದಿನಗಳಿಂದ ಜೈಲಿನಲ್ಲಿ ಇದ್ದು, ಅವರಿಗೆ ಜಾಮೀನು ನೀಡಬೇಕು ಎಂದು ವಾದಿಸಿದರು.
ತರುಣ್ ರಾಜು ವಿರುದ್ಧ ಪ್ರತ್ಯೇಕ ಆರೋಪವಿಲ್ಲದೆ, ಅವರು ರನ್ಯಾ ಜೊತೆ ಕಂಪನಿಯನ್ನು ಹೊಂದಿದ್ದ ಕಾರಣಕ್ಕೆ ಪ್ರಕರಣಕ್ಕೆ ಎಳೆಯಲಾಗಿದೆ ಎಂದು ತರುಣ್ ಪರ ವಕೀಲರು ವಾದಿಸಿದರು. ಅವರು ಅಮೆರಿಕ ಪ್ರಜೆಗಳಾಗಿದ್ದು, ಚಿನ್ನವನ್ನು ದುಬೈನಲ್ಲಿ ಖರೀದಿ ಮಾಡಿ ಬೇರೊಂದು ದೇಶಕ್ಕೆ ಕಳುಹಿಸುವ ಉದ್ದೇಶವಿದ್ದೆಂದೂ, ಬಳಿಕ ಬೆಂಗಳೂರಿಗೆ ತಂದು ರನ್ಯಾ ಮೂಲಕ ಸಾಗಿಸಲು ಯೋಜಿಸಿದ್ದರು ಎಂದು ತನಿಖಾ ಅಧಿಕಾರಿಗಳು ಹೇಳಿದ್ದಾರೆ. ಇಬ್ಬರೂ ಒಟ್ಟು 31 ಬಾರಿ ದುಬೈಗೆ ಪ್ರಯಾಣಿಸಿದ್ದಾರೆ. ಡಿಆರ್ಐ ಪರ ವಕೀಲರು, ಪ್ರಕರಣ ತನಿಖಾ ಹಂತದಲ್ಲಿರುವ ಕಾರಣ, ಈಗಲೇ ಜಾಮೀನು ನೀಡಬಾರದು ಎಂದು ಮನವಿ ಮಾಡಿದ್ದಾರೆ.