ಕಾರವಾರ: ಎಲ್ಲೆಡೆ ಅದ್ದೂರಿಯಿಂದ ಆಚರಿಸಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಕೂಡ ರಾಜ್ಯೋತ್ಸವದ ಸಂಭ್ರಮ ಮುಗಿಲು ಮುಟ್ಟಿದೆ. ಉತ್ಸವದ ಹಿನ್ನೆಲೆಯಲ್ಲಿ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಗಾಳಿಪಟ ಉತ್ಸವ ಆಚರಣೆ ಮಾಡಲಾಗಿದೆ. ಜಿಲ್ಲಾಧಿಕಾರಿ ಗಾಳಿಪಟ ಹಾರಿಸೋ ಮೂಲಕ ಬಾಲ್ಯದ ನೆನಪುಗಳನ್ನ ಮೆಲುಕು ಹಾಕಿ ಸಂತಸ ವ್ಯಕ್ತಪಡಿಸಿದ್ದಾರೆ.
ಒಂದೆಡೆ ನೂರಾರು ಸಂಖ್ಯೆಯಲ್ಲಿ ಕಡಲ ತೀರದಲ್ಲಿ ಸೇರಿರುವ ಜನರು, ಮತ್ತೊಂದೆಡೆ ಗಾಳಿಪಟವನ್ನು ಕೈಯಲ್ಲಿ ಹಿಡಿದು ಕಡಲ ತೀರದಲ್ಲಿ ಹಾರಿಸುತ್ತಾ ಖುಷಿ ಪಡುತ್ತಿರುವ ಪ್ರವಾಸಿಗರು, ಇನ್ನೊಂದೆಡೆ ಜಿಲ್ಲಾಧಿಕಾರಿ ಸಹ ಗಾಳಿಪಟ ಹಾರಿಸುತ್ತಾ ಸಂಭ್ರಮಿಸುತ್ತಿರುವ ದೃಶ್ಯ ಕಂಡುಬಂತು. ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಆಗಮಿಸಿ ಕನ್ನಡ ಬಾವುಟದ ಹಳದಿ ಹಾಗೂ ಕೆಂಪು ಬಣ್ಣದ ನೂರಾರು ಗಾಳಿಪಟಗಳನ್ನು ಪ್ರವಾಸಿಗರಿಗೆ ವಿತರಿಸಿ, ಏಕಕಾಲಕ್ಕೆ ಹಾರಿಸಿದರು.
ಗಾಳಿಪಟ ಹಾರಿಸುವುದಕ್ಕೆ ಕೇವಲ ಜಿಲ್ಲೆಯವರು, ರಾಜ್ಯದವರು ಮಾತ್ರವಲ್ಲದೇ ಹೊರ ರಾಜ್ಯದ ಪ್ರವಾಸಿಗರು ಸಹ ಆಗಮಿಸಿ ‘ಜೈ ಕರ್ನಾಟಕ ಮಾತೆ’ ಎನ್ನುವ ಮೂಲಕ ಸಂಭ್ರಮದಲ್ಲಿ ಪಾಲ್ಗೊಂಡರು. ಮೈಸೂರು ರಾಜ್ಯ ೧೯೭೩ರ ಅ. ೨೦ರಂದು ಕರ್ನಾಟಕ ಎಂದು ಮರು ನಾಮಕರಣಗೊಂಡಿದ್ದು ೫೦ ವರ್ಷ ಪೂರೈಸಿದೆ. ಈ ಐತಿಹಾಸಿಕ ಸಂದರ್ಭದಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿ ಸಾರುವಂತಹ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ, ವರ್ಷವಿಡೀ ಆಯೋಜಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.