ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್. ನಗರ : ಸರ್ಕಾರಿ ಕಚೇರಿಗಳು ಮತ್ತು ಸಹಕಾರ ಸಂಘಗಳಲ್ಲಿ ನೌಕರರಾಗಿ ಕೆಲಸ ಮಾಡುವವರು ತಮ್ಮ ಸೇವೆಯ ಅವಧಿಯಲ್ಲಿ ಮಾಡುವ ಉತ್ತಮ ಕೆಲಸಗಳು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತವೆ ಎಂದು ಪಟ್ಟಣದ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಬಿ.ಎಂ. ಮಲ್ಲಿಕಾರ್ಜುನ ಹೇಳಿದರು.
ಪಟ್ಟಣದ ಪಿ ಎಲ್ ಡಿ ಬ್ಯಾಂಕಿನಲ್ಲಿ ಕಳೆದ 32 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸಿ ಶುಕ್ರವಾರ ನಿವೃತ್ತರಾದ ಪ್ರಭಾರ ವ್ಯವಸ್ಥಾಪಕಿ ಗಾಯಿತ್ರಮ್ಮ ಅವರಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು ಜನ ಪರವಾದ ಕೆಲಸ ಮಾಡುವ ಎಲ್ಲರೂ ಅಭಿನಂದನೆಗೆ ಅರ್ಹರು ಎಂದರು.
ಸಾಲಿಗ್ರಾಮ ಮತ್ತು ಕೆ. ಆರ್. ನಗರ ತಾಲೂಕಿನ ರೈತರ ಜೀವನಾಡಿಯಾಗಿರುವ ನಮ್ಮ ಬ್ಯಾಂಕು ಸಕಾಲದಲ್ಲಿ ರೈತರಿಗೆ ಸಾಲ ನೀಡುವುದರ ಜೊತೆಗೆ ಮುಸೂಲಾತಿಯಲ್ಲಿ ಜಿಲ್ಲೆಯಲ್ಲಿಯೇ ಉತ್ತಮ ಸಾಧನೆ ಮಾಡಿದ್ದು ಇದಕ್ಕೆ ಆಡಳಿತ ಮಂಡಳಿಯವರು ಮತ್ತು ಸಿಬ್ಬಂದಿಯ ಸಹಕಾರ ಕಾರಣ ಎಂದು ತಿಳಿಸಿದರು.
ಬ್ಯಾಂಕಿನ ವತಿಯಿಂದ ಈವರೆಗೆ 14 ಕೋಟಿ ವಿವಿಧ ಬಾಬತ್ತಿನ ಸಾಲ ನೀಡಲಾಗಿದ್ದು ರೈತರು ಸಕಾಲದಲ್ಲಿ ಮರುಪಾವತಿ ಮಾಡಿ ಉತ್ತಮ ಸಹಕಾರ ನೀಡುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ ಅಧ್ಯಕ್ಷರು ಮುಂದಿನ ದಿನಗಳಲ್ಲಿ ಶಾಸಕ ಡಿ. ರವಿಶಂಕರ್ ಅವರ ಮಾರ್ಗದರ್ಶನ ಮತ್ತು ಆಡಳಿತ ಮಂಡಳಿಯ ಸಹಕಾರದಿಂದ ಬ್ಯಾಂಕನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುದಾಗಿ ಭರವಸೆ ನೀಡಿದರು.
ಸೇವೆಯಿಂದ ನಿವೃತ್ತರಾದ ಪ್ರಭಾರ ವ್ಯವಸ್ಥಾಪಕಿ ಗಾಯಿತ್ರಮ್ಮ ಮಾತನಾಡಿ ನನ್ನ ಅವಧಿಯಲ್ಲಿ ಉತ್ತಮ ಸಹಕಾರ ನೀಡಿದ ಎಲ್ಲಾ ಆಡಳಿತ ಮಂಡಳಿಯವರು, ರೈತರು ಮತ್ತು ಕಚೇರಿ ಸಿಬ್ಬಂದಿಗೆ ಕೃತಜ್ಞಳಾಗಿ ಇರುತ್ತೇನೆಂದು ಭಾವುಕರಾಗಿ ನುಡಿದರು.
ಸಕಾಲದಲ್ಲಿ ರೈತರಿಗೆ ಸಾಲ ನೀಡಿ ಎಲ್ಲರ ಏಳಿಗೆಗೂ ಕಾರಣವಾಗಿರುವ ಕೆ. ಆರ್. ನಗರ ಪಿ ಎಲ್ ಡಿ ಬ್ಯಾಂಕ್ ಭವಿಷ್ಯದಲ್ಲಿ ರಾಜ್ಯ ಮಟ್ಟದಲ್ಲಿ ಉತ್ತಮ ಹೆಸರು ಗಳಿಸಬೇಕೆಂದು ಶುಭ ಹಾರೈಸಿದರು.
ನಿರ್ದೇಶಕರಾದ ಚಂದ್ರೇಗೌಡ, ಹಾಡ್ಯ ಎನ್. ಸಿ. ಪ್ರಸಾದ್, ಚಂದ್ರಶೇಖರ್, ರಾಮೇಗೌಡ, ರಮೇಶ್, ಬಿ. ಸಿದ್ದೇಗೌಡ, ಕಲಾವತಿ, ಪರಶುರಾಮಯ್ಯ, ಕಛೇರಿ ಸಿಬ್ಬಂದಿಗಳಾದ ಕುಮಾರ್. ಹಾಲಪ್ಪ, ಉಷಾ, ಶೃತಿ, ಗಾಯಿತ್ರಮ್ಮ ಅವರ ಪತಿ ನಾಗರಾಜೇಗೌಡ. ಪುತ್ರಿ ಪಾವನ ಮತ್ತಿತರರು ಇದ್ದರು.