ಇನ್ಮುಂದೆ ವೈಟಿಂಗ್ ಲಿಸ್ಟ್ ಇಲ್ಲ, ದಟ್ಟಣೆಯೂ ಇರಲ್ಲ
ನವದೆಹಲಿ: ರೈಲು ಪ್ರಯಾಣ ದಿನದಿಂದ ದಿನಕ್ಕೆ ಕಠಿಣವಾಗುತ್ತಿದೆ. ಕಾರಣ ಸಂಚಾರ ದಟ್ಟಣೆ, ನಿಲ್ಲಲು ಜಾಗವಿಲ್ಲದಷ್ಟು ಪ್ರಯಾಣಿಕರು, ಬುಕಿಂಗ್ ಮಾಡಿದರೆ ವೈಟಿಂಗ್ ಲಿಸ್ಟ್ ಕಾಯಬೇಕಾದ ಪರಿಸ್ಥಿತಿ. ಈ ಎಲ್ಲಾ ಸಮಸ್ಯೆಗಳು ಇನ್ಮು ಮುಂದೆ ಇರುವುದಿಲ್ಲ. ಕಾರಣ ಭಾರತೀಯ ರೈಲ್ವೇಯಲ್ಲಿ ಮಹತ್ತರ ಬದಲಾವಣೆ ತರಲಾಗುತ್ತಿದೆ. ಬುಕಿಂಗ್ ಮಾಡಿದವರಿಗೆ ತಕ್ಷಣವೇ ಟಿಕೆಟ್ ಕನ್‌ಫರ್ಮ್, ವೈಟಿಂಗ್ ಲಿಸ್ಟ್‌ಗೆ ಕಾಯುವ ಪ್ರಮೇಯವೇ ಇಲ್ಲ. ಇನ್ನು ಪ್ರಯಾಣ ಕೂಡ ಸರಳ ಹಾಗೂ ಆರಾಮದಾಯಕವಾಗುತ್ತಿದೆ. ಹೌದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಈ ಕುರಿತು ಮಹತ್ವದ ಮಾಹಿತಿ ನೀಡಿದ್ದಾರೆ.
ರೈಲು ಸೇವೆಗಳನ್ನು ಮತ್ತಷ್ಟು ಉತ್ತಮಪಡಿಸಲಾಗುತ್ತಿದೆ. ಇದಕ್ಕಾಗಿ ಮಹತ್ವದ ರೂಪುರೇಶೆ ತಯಾರಾಗಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಪ್ರಮುಖವಾಗಿ 2032ರ ವೇಳೆಗೆ ಭಾರತೀಯ ರೈಲ್ವೇ ಸಂಪೂರ್ಣ ಬದಲಾಗಲಿದೆ. ಟಿಕೆಟ್ ಬುಕಿಂಗ್, ಟಿಕೆಟ್ ಕನ್‌ಫರ್ಮ್ ಸುಲಭ. ರೈಲು ಪ್ರಯಾಣ ಆರಾಮದಾಯಕವಾಗಲಿದೆ. ಕಿಕ್ಕಿರಿದು ತುಂಬಿದ ರೈಲುಗಳು ಇರುವುದಿಲ್ಲ. ಕಾರಣ ರೈಲು ಸಂಖ್ಯೆ, ಸೇವೆ ಹೆಚ್ಚಿಸಲಾಗುತ್ತಿದೆ. ರೈಲು ಪ್ರಯಾಣಿಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 40 ಮಿಲಿಯನ್ ಪ್ರಯಾಣಿಕರು ಕೇವಲ ಬೇಸಿಗೆಯಲ್ಲಿ ಪ್ರಯಾಣಿಸಿದ್ದಾರೆ ಎಂದು ವೈಷ್ಣವ್ ಹೇಳಿದ್ದಾರೆ.
ರೈಲ್ವೇ ಸಚಿವರಾಗಿ ಅಧಿಕಾರವಹಿಸಿಕೊಂಡ ಬಳಿಕ ರೈಲ್ವೇ ಇಲಾಖೆ ಅಧಿಕಾರಿಗಳ ಜೊತೆ ಉನ್ನತ ಸಭೆ ನಡೆಸಿದ ಸಚಿವರು, ಶಿಸ್ತು, ಸಮಯಕ್ಕೆ ತಕ್ಕನಾಗಿ ಕೆಲಸಕ್ಕೆ ಹಾಜರಾಗುವುದು. ಕೆಲಸ, ಕರ್ತವ್ಯದಲ್ಲಿ ಲೋಪವಾಗದಂತೆ ನೋಡಿಕೊಳ್ಳಬೇಕು ಎಂದು ಖಡಕ್ ಸೂಚನೆ ನೀಡಿದ್ದಾರೆ. ಜನಸಾಮಾನ್ಯರು ರೈಲು ಪ್ರಯಾಣವನ್ನೇ ನೆಚ್ಚಿಕೊಂಡಿದ್ದಾರೆ.ಹೀಗಾಗಿ ಅತೀವ ಮುನ್ನಚ್ಚೆರಿಕೆ ಅಗತ್ಯವಿದೆ. ಗೊಂದಲಗಳು ಸೃಷ್ಟಿಯಾಗಬಾರದು. ರೈಲು ಪ್ರಯಾಣದಲ್ಲಿ ಯಾವುದೇ ತೊಡಕುಗಳು, ಆತಂಕ ಇರಬಾರದು ಎಂದು ಸಚಿವರು ಖಡಕ್ ಸೂಚನೆ ನೀಡಿದ್ದಾರೆ.
ರೈಲಿನಲ್ಲಿ ನೀಡುವ ಆಹಾರ, ಶುಚಿತ್ವ, ರೈಲಿನ ಶುಚಿತ್ವ, ಶೌಚಾಲಯ, ನೀರು, ಎಸಿ, ಫ್ಯಾನ್ ಎಲ್ಲದರ ಕುರಿತು ಪರಿಶೀಲನೆ ಆಗಬೇಕು. ರೈಲು ಸಮಯದಲ್ಲಿ ವಿಳಂಬತೆ ಇರಬಾರದು. ತಕ್ಕ ಸಮಯಕ್ಕೆ ರೈಲು ಹೊರಡಬೇಕು. ಪ್ರಯಾಣಿಕರ ಸುರಕ್ಷತೆಗೆ ಪ್ರಮುಖ ಆದ್ಯತೆ ನೀಡಬೇಕು ಎಂದು ಸೂಚಿಸಿದ್ದಾರೆ.