- ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಹಿತ್ಯ ಕ್ಷೇತ್ರದ ಮೂಲಕ ವೈಚಾರಿಕ ತತ್ವಗಳು ಹಾಗೂ ವಿಶ್ವ ಮಾನವ ಸಂದೇಶ ನೀಡಿದ ಕುವೆಂಪು ಅವರ ತತ್ವಾದರ್ಶಗಳ ಪಾಲನೆ ಅಗತ್ಯವಾಗಿ ಎಲ್ಲರಲ್ಲು ಆಗಬೇಕೆಂದು ರಾಜ್ಯ ಶಿಕ್ಷಕರ ಸಂಘದ ಮಾಜಿ ಸಂಘಟನಾ ಕಾರ್ಯದರ್ಶಿ ಹೊಸೂರು.ಎ.ಕುಚೇಲ್ ಅಭಿಪ್ರಾಯ ಪಟ್ಟರು.
ಸಾಲಿಗ್ರಾಮ ತಾಲೂಕಿನ ಹೊಸೂರು ಆಸ್ವತ್ರೆ ವೃತ್ತದಲ್ಲಿ ನಡೆದ ರಾಷ್ಟ್ರ ಕವಿ ಕುವೆಂಪು ಅವರ 120 ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕುವೆಂಪು ಅವರು ಯುಗ ಪ್ರವರ್ತಕ: ‘ಕನ್ನಡ ಭಾಷೆ, ಕಾವ್ಯ, ಕಾದಂಬರಿ, ನಾಟಕ, ಕವಿತೆ ಹಾಗೂ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಹೊಸಚಾಪನ್ನು ಮೂಡಿಸಿದ ಮಹಾಕವಿ ಕುವೆಂಪು ಅವರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆಯ ಮೂಲಕ ಜ್ಞಾನ ಪೀಠ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕರ್ನಾಟಕ ರತ್ನ ಪ್ರಶಸ್ತಿಗಳು ತಮ್ಮ ದಾಗಿಸಿಕೊಡು ರಾಜ್ಯದ ಹಿರಿಮೆಯನ್ನು ಹೆಚ್ಚಿಸಿದರು ಎಂದು ಹೇಳಿದರು.
ಕುವೆಂಪು ಅವರು 20ನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ಅವರೊಬ್ಬ ರಸಋಷಿ. ತಮ್ಮ ಮೇರು ಕೃತಿ ‘ಶ್ರೀ ರಾಮಾಯಣ ದರ್ಶನಂ’ನಲ್ಲಿ ಈ ಕಾಲಕ್ಕೆ ಅಗತ್ಯವಾದ ದರ್ಶನವನ್ನು ನೀಡಿದ್ದಾರೆ. ಅವರ ಎರಡು ಬೃಹತ್ ಕಾದಂಬರಿಗಳಾದ ‘ಕಾನೂರು ಹೆಗ್ಗಡತಿ’ ಹಾಗೂ ‘ಮಲೆಗಳಲ್ಲಿ ಮದುಮಗಳು’ ಅವರನ್ನು ಜಗತ್ತಿನ ಮಹಾನ್ ಕಾದಂಬರಿಕಾರರ ಸಾಲಿನಲ್ಲಿ ನಿಲ್ಲುವಂತೆ ಮಾಡಿದ್ದು ಅವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ ಅಲ್ಲದೇ ಮೈಸೂರು ವಿಶ್ವವಿದ್ಯಾನಿಲಯದ ಅಭಿವೃದ್ದಿಗೆ ತಮ್ಮದೆ ಕೊಡುಗೆ ನೀಡಿದವರು ಎಂದರು.
ಇದೇ ಸಂದರ್ಭದಲ್ಲಿ ನಿಧನರಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಂತಾಪ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಟಿಎಪಿಎಂಎಸ್ ನಿರ್ದೇಶಕ ಎಸ್. ಟಿ ಕೀರ್ತಿ, ಮಾಜಿ ಗ್ರಾಂ. ಪಂ. ಸದಸ್ಯ ಡೈರಿಮಾದು, ಡೈರಿ ಅಧ್ಯಕ್ಷ ಎಚ್.ಆರ್.ಕೃಷ್ಣಮೂರ್ತಿ, ಎಲ್‌ಐಸಿ ರಮೇಶ್, ರಾಘವೇಂದ್ರ, ರಾಜೇಶ್, ಕೋಳಿ ದಿನೇಶ್, ಕಂಡಕ್ಟರ್ ಬಲರಾಮಣ್ಣ, ಟೈಲರ್ ಪ್ರಸನ್ನ, ಪೂರಿ ಮಂಜು, ಮಾರಿಗುಡಿ ರಾಘು, ಮಹಾಲಿಂಗು ಸೇರಿದಂತೆ ಮತ್ತಿತರರು ಹಾಜರಿದ್ದರು.