Friday, July 3, 2026
Google search engine

Homeದೇಶಪಿಎಂಜಿಕೆಎವೈ ಅಡಿಯಲ್ಲಿ ಇನ್ನು ಮುಂದೆ ಸಿಗಲಿದೆ ಉತ್ತಮ ಗುಣಮಟ್ಟದ ಅಕ್ಕಿ: 80 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ...

ಪಿಎಂಜಿಕೆಎವೈ ಅಡಿಯಲ್ಲಿ ಇನ್ನು ಮುಂದೆ ಸಿಗಲಿದೆ ಉತ್ತಮ ಗುಣಮಟ್ಟದ ಅಕ್ಕಿ: 80 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಅನುಕೂಲ

ನವದೆಹಲಿ: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY) ಮತ್ತು ಇತರ ಕಲ್ಯಾಣ ಯೋಜನೆಗಳ ಅಡಿಯಲ್ಲಿ ವಿತರಿಸಲಾಗುವ ಅಕ್ಕಿಯ ಗುಣಮಟ್ಟವನ್ನು ಸುಧಾರಿಸಲು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (CCEA) ಮಹತ್ವದ ನಿರ್ಧಾರ ಕೈಗೊಂಡಿದೆ. ಸುಮಾರು 30 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಅಡಿಯಲ್ಲಿ ನೀಡಲಾಗುವ ಅಕ್ಕಿಯ ಗುಣಮಟ್ಟದ ಮಾನದಂಡಗಳನ್ನು ಪರಿಷ್ಕರಿಸಲಾಗಿದೆ. ಇದರಿಂದಾಗಿ 80 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಇನ್ನು ಮುಂದೆ ಕಡಿಮೆ ನುಚ್ಚು (ತುಂಡು ಅಕ್ಕಿ) ಇರುವ ಉತ್ತಮ ಗುಣಮಟ್ಟದ ಅಕ್ಕಿ ಸಿಗಲಿದೆ. ಆದರೆ, ಫಲಾನುಭವಿಗಳ ಪಡಿತರ ಅರ್ಹತೆಯಲ್ಲಿ (ಪ್ರಮಾಣದಲ್ಲಿ) ಯಾವುದೇ ಬದಲಾವಣೆ ಇರುವುದಿಲ್ಲ.

ನುಚ್ಚು ಅಕ್ಕಿಯ ಪ್ರಮಾಣದಲ್ಲಿ ಭಾರೀ ಕಡಿತ

ಸರ್ಕಾರದ ಹೊಸ ನಿರ್ಧಾರದ ಪ್ರಕಾರ, ಪಿಎಂಜಿಕೆಎವೈ ಅಡಿಯಲ್ಲಿ ನೀಡಲಾಗುವ ಹಸಿ ಅಕ್ಕಿಯಲ್ಲಿ (Raw Rice) ನುಚ್ಚು ಅಕ್ಕಿಯ ಗರಿಷ್ಠ ಮಿತಿಯನ್ನು ಶೇ. 25 ರಿಂದ ಶೇ. 10 ಕ್ಕೆ ಇಳಿಸಲಾಗಿದೆ. ಅದೇ ರೀತಿ, ಕುಸುಬಲ ಅಕ್ಕಿಯಲ್ಲಿ (Parboiled Rice) ಈ ಮಿತಿಯನ್ನು ಶೇ. 16 ರಿಂದ ಶೇ. 5 ಕ್ಕೆ ಇಳಿಸಲಾಗಿದೆ. ಈ ಉತ್ತಮ ಗುಣಮಟ್ಟದ ಅಕ್ಕಿಯ ಖರೀದಿಯು ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಮುಂಬರುವ ಖಾರಿಫ್ ಮಾರುಕಟ್ಟೆ ಹಂಗಾಮು 2027-28 ರ ವೇಳೆಗೆ ಎಲ್ಲಾ ರಾಜ್ಯಗಳಲ್ಲಿ ಹಂತ-ಹಂತವಾಗಿ ಅನುಷ್ಠಾನಗೊಳ್ಳಲಿದೆ.

ಫಲಾನುಭವಿಗಳಿಗೆ ಪೌಷ್ಠಿಕ ಹಾಗೂ ಗುಣಮಟ್ಟದ ಅನ್ನ

ಕೇವಲ ಆಹಾರ ಭದ್ರತೆಯನ್ನು ಖಾತರಿಪಡಿಸುವುದು ಮಾತ್ರವಲ್ಲದೆ, ಫಲಾನುಭವಿಗಳಿಗೆ ನೋಡಲು ಉತ್ತಮವಾಗಿರುವ ಮತ್ತು ಹೆಚ್ಚು ಇಡೀ ಕಾಳುಗಳನ್ನು ಹೊಂದಿರುವ ಗುಣಮಟ್ಟದ ಅಕ್ಕಿಯನ್ನು ಒದಗಿಸುವುದು ಈ ನಿರ್ಧಾರದ ಮುಖ್ಯ ಉದ್ದೇಶವಾಗಿದೆ ಎಂದು ಸರ್ಕಾರ ತಿಳಿಸಿದೆ. ಪಡಿತರ ಪ್ರಮಾಣದಲ್ಲಿ ಯಾವುದೇ ಕಡಿತವಿರುವುದಿಲ್ಲ, ಆದರೆ ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆಯಾಗಲಿದೆ.

ನುಚ್ಚು ಅಕ್ಕಿಯ ಮರುಬಳಕೆ ಮತ್ತು ವಾರ್ಷಿಕ ₹2,161 ಕೋಟಿ ಉಳಿತಾಯ

ಅಕ್ಕಿ ಗಿರಣಿಗಳಲ್ಲಿ ಸಂಸ್ಕರಣೆಯ ಸಮಯದಲ್ಲಿ ಹೊರಬರುವ ನುಚ್ಚು ಅಕ್ಕಿಯನ್ನು ಪ್ರತ್ಯೇಕಿಸಿ, ಕೈಗಾರಿಕಾ ಮತ್ತು ಇತರ ಉತ್ಪಾದಕ ಕಾರ್ಯಗಳಿಗೆ ಬಳಸಲಾಗುತ್ತದೆ. ಅಕ್ಕಿ ಗಿರಣಿಗಳಿಂದಲೇ ನೇರವಾಗಿ ಈ ನುಚ್ಚು ಅಕ್ಕಿಯನ್ನು ಹರಾಜು ಮಾಡಲಾಗುತ್ತದೆ. ಜೊತೆಗೆ, ಇನ್ಮುಂದೆ ಸೆಣಬಿನ ಚೀಲಗಳ ಬದಲಿಗೆ ಎಚ್‌ಡಿಪಿಇ (HDPE) ಬ್ಯಾಗ್‌ಗಳನ್ನು ಬಳಸುವುದರಿಂದ ಪ್ಯಾಕೇಜಿಂಗ್ ವೆಚ್ಚವೂ ಕಡಿಮೆಯಾಗಲಿದೆ. ಈ ಎಲ್ಲಾ ಕ್ರಮಗಳಿಂದಾಗಿ ಸಾರಿಗೆ ಮತ್ತು ದಾಸ್ತಾನು ವೆಚ್ಚ ತಗ್ಗಿ, ಸರ್ಕಾರಕ್ಕೆ ಪ್ರತಿ ವರ್ಷ ಸುಮಾರು 2,161 ಕೋಟಿ ರೂಪಾಯಿ ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.

ಪೈಲಟ್ ಯೋಜನೆ ಯಶಸ್ವಿ

ಈ ಹೊಸ ವ್ಯವಸ್ಥೆಯನ್ನು ಈಗಾಗಲೇ ಹರಿಯಾಣ, ಆಂಧ್ರಪ್ರದೇಶ, ಪಂಜಾಬ್, ಒಡಿಶಾ, ತೆಲಂಗಾಣ ಮತ್ತು ಛತ್ತೀಸ್‌ಗಢ ರಾಜ್ಯಗಳಲ್ಲಿ ಪ್ರಾಯೋಗಿಕವಾಗಿ (Pilot Basis) ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಹೀಗಾಗಿ ಬೃಹತ್ ಪ್ರಮಾಣದಲ್ಲಿ ಉತ್ತಮ ಗುಣಮಟ್ಟದ ಅಕ್ಕಿ ಉತ್ಪಾದನೆ ಮತ್ತು ವಿತರಣೆ ಸಂಪೂರ್ಣವಾಗಿ ಸಾಧ್ಯ ಎಂದು ಸರ್ಕಾರ ಹೇಳಿದೆ.

ಕ್ಯೂಆರ್-ಕೋಡ್ (QR-Code) ಮೂಲಕ ಪಾರದರ್ಶಕತೆ

ಅಕ್ರಮ ದಂಧೆಗೆ ಕಡಿವಾಣ ಹಾಕಲು ಮತ್ತು ಪಾರದರ್ಶಕತೆ ಹೆಚ್ಚಿಸಲು ಅಕ್ಕಿಯ ಚೀಲಗಳ ಮೇಲೆ ಕ್ಯೂಆರ್-ಕೋಡ್‌ಗಳನ್ನು ಅಳವಡಿಸಲಾಗುತ್ತದೆ. ಇದರಿಂದ ಇಡೀ ಪೂರೈಕೆ ಸರಪಳಿಯನ್ನು ಸುಲಭವಾಗಿ ಮೇಲ್ವಿಚಾರಣೆ ಮಾಡಬಹುದು. ಇದು ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಜವಾಬ್ದಾರಿಯನ್ನು ಹೆಚ್ಚಿಸಲಿದ್ದು, ಕಾಳಸಂತೆಯ ದಂಧೆಯನ್ನು ತಡೆಯಲು ಸಹಕಾರಿಯಾಗಲಿದೆ. (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular