ಗುಂಡ್ಲುಪೇಟೆ: ಕೇರಳದ ವೈನಾಡಿನಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನಲೆ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಮೂಲೆಹೊಳೆ ತುಂಬಿ ಹರಿಯುತ್ತಿದೆ.
ಕೇರಳಕ್ಕೆ ಕಳೆದ 4-5 ದಿನಗಳಿಂದ ಹೆಚ್ಚಿನ ಮಳೆಯಾಗುತ್ತಿರುವ ಕಾರಣ ಕ್ಯಾಲಿಕೇಟ್ ಮಾರ್ಗವಾಗಿ ಅಧಿಕ ಮಳೆ ನೀರು ಅಭಯಾರಣ್ಯದೊಳಗಿಂದ ನೀರು ಹರಿದು ಬರುತ್ತಿದೆ. ಇದರಿಂದ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಅನೇಕ ಕೆರೆಕಟ್ಟೆಗಳಲ್ಲಿ ನೀರು ನಿಂತಿದೆ.
ಕೇರಳದಿಂದ ಕಾನನದ ಮೂಲಕ ಬರುತ್ತಿರುವ ನೀರಿನ ವೇಗ ಹೆಚ್ಚಾದ ಹಿನ್ನೆಲೆ ಬಂಡೀಪುರದ ಮೂಲೆಹೊಳೆಯಲ್ಲಿ ಮಳೆ ನೀರು ಭೋರ್ಗರೆದು ಹರಿಯುತ್ತಿದ್ದು, ಕಬಿನಿ ಜಲಾಶಯಕ್ಕೆ ಭಾರಿ ಪ್ರಮಾಣ ನೀರು ಹೋಗುತ್ತಿದೆ. ಸೋಮವಾರ ಹಾಗೂ ಮಂಗಳವಾರ ಮೂಲೆಹೊಳೆಯಿಂದ ಹೊರ ಹರಿವಿನ ಪ್ರಮಾಣ ಹೆಚ್ಚಿರುವ ಕಾರಣ ಅಭಯಾರಣ್ಯದ ಮುಂದಿನ ಕೆರೆಕಟ್ಟೆಗಳು ತುಂಬುತ್ತಿವೆ.
ನೀರಿನ ಆತಂಕ ದೂರ: ಕೇರಳಕ್ಕೆ ಉತ್ತಮ ಮಳೆಯಾಗಿ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯಲ್ಲಿ ನೀರು ಹರಿಯುತ್ತಿರುವ ಹಿನ್ನೆಲೆ ಹಲವು ಹಳ್ಳಕೊಳ್ಳ, ಕೆರೆಕಟ್ಟೆಗಖಳು ತುಂಬಿದೆ. ಇದರಿಂದ ಕಾಡುಪ್ರಾಣಿಗಳಿಗೆ ಅಭಯಾರಣ್ಯದಲ್ಲಿ ಕುಡಿಯುವ ನೀರಿನ ಆತಂಕ ದೂರವಾಗಿದೆ. ಜೊತೆಗೆ ಅರಣ್ಯಾಧಿಕಾರಿಗಳಿಗೆ ಕಾಡ್ಗಿಚ್ಚಿನ ಭೀತಿಯು ಸಹ ತಪ್ಪಿದಂತಾಗಿದೆ.