Sunday, April 5, 2026
Google search engine

Homeಸ್ಥಳೀಯನಗರಸಭೆ ಸೇರ್ಪಡೆ ವಿರೋಧಿಸಿ ಗೊರವನಹಳ್ಳಿ ಗ್ರಾಮಸ್ಥರಿಂದ ಶಾಸಕರಿಗೆ ಛೀಮಾರಿ : ಪೊಲೀಸ್ ಭದ್ರತೆಯಲ್ಲಿ ಗುದ್ದಲಿಪೂಜೆ ನೆರವೇರಿಸಿದ...

ನಗರಸಭೆ ಸೇರ್ಪಡೆ ವಿರೋಧಿಸಿ ಗೊರವನಹಳ್ಳಿ ಗ್ರಾಮಸ್ಥರಿಂದ ಶಾಸಕರಿಗೆ ಛೀಮಾರಿ : ಪೊಲೀಸ್ ಭದ್ರತೆಯಲ್ಲಿ ಗುದ್ದಲಿಪೂಜೆ ನೆರವೇರಿಸಿದ ಶಾಸಕ ಕದಲೂರು ಉದಯ್

ಮದ್ದೂರು : ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಶನಿವಾರ ಶಾಸಕ ಕದಲೂರು ಉದಯ್ ಗೊರವನಹಳ್ಳಿಗೆ ಭೂಮಿ ಪೂಜೆ ನೆರವೇರಿಸಲು ಬಂದ ವೇಳೆಯೇ ಗ್ರಾಮದ ಕೆಲವು ಗ್ರಾಮಸ್ಥರು ಮದ್ದೂರು ನಗರಸಭೆಗೆ ಗೊರವನಹಳ್ಳಿಯನ್ನು ಸೇರ್ಪಡೆಗೊಳಿಸಿರುವುದರ ವಿರುದ್ಧ ಬೇಡವೇ ಬೇಡ ನಗರಸಭೆ ಬೇಡ ಎಂದು ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು.
ಗೋರವನಹಳ್ಳಿ ಗ್ರಾಮದಲ್ಲಿ ಶಾಸಕರು ಹಾಗೂ ಗ್ರಾಮಸ್ಥರ ನಡುವೆ ಹೈಡ್ರಾಮವೇ ನಡೆದಿದ್ದು, ಪೊಲೀಸ್ ಭದ್ರತೆಯಲ್ಲಿ ಅಭಿವೃದ್ದಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿತು. ಮದ್ದೂರು ಶಾಸಕ ಕದಲೂರು ಉದಯ್ ಅವರಿಗೆ ಗೊರವನಹಳ್ಳಿ ಗ್ರಾಮಸ್ಥರು ಛೀಮಾರಿ ಹಾಕಿದರು. ತಮ್ಮೂರಿನ ಗ್ರಾ.ಪಂ.ನ್ನು ನಗರಸಭೆ ಸೇರಿಸಿದ್ದಕ್ಕೆ ಶಾಸಕ ಕದಲೂರು ಉದಯ್ ವಿರುದ್ದ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. ಗ್ರಾಮಸ್ಥರ ವಿರೋಧಕ್ಕೆ ಹಿನ್ನಲೆ ಪೊಲೀಸ್ ಭದ್ರತೆಯಲ್ಲಿ ಬಂದು ಶಾಸಕ ಕೆ.ಎಂ.ಉದಯ್ ಅವರು ಗುದ್ದಲಿ ಪೂಜೆ ಮಾಡಿದರು. ಗುದ್ದಲಿ ಪೂಜೆಗೆ ಶಾಸಕ ಕದಲೂರು ಉದಯ್ ಬಂದ ವೇಳೆ ಗೊರವನಹಳ್ಳಿ ಗ್ರಾಮಸ್ಥರು ಶಾಸಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ತಮ್ಮ ಪಂಚಾಯ್ತಿಯನ್ನು ಪಂಚಾಯ್ತಿಯಿಂದ ಕೈ ಬಿಡುವಂತೆ ಆಗ್ರಹಿಸಿದರು. ಅತ್ತ ಗ್ರಾಮಸ್ಥರು ಶಾಸಕರ ವಿರುದ್ಧ ಧಿಕ್ಕಾರ ಕೂಗುತ್ತಿದ್ದರೆ, ಇತ್ತ ಬೆಂಬಲಿಗರು ಶಾಸಕರಿಗೆ ಜೈಕಾರ ಹಾಕಿದರು. ಪೊಲೀಸರ ಬಿಗಿ ಭದ್ರತೆಯಿಂದ ಮಾತಿನ ಚಕಮಕಿ ತಪ್ಪಿತು. ಪೊಲೀಸರ ಭದ್ರತೆಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕದಲೂರು ಉದಯ್ ಗುದ್ದಲಿ ಪೂಜೆ ನೆರವೇರಿಸಿದರು.
ಈ ವೇಳೆ ಒಂದೇ ಸ್ಥಳದಲ್ಲಿ ರಸ್ತೆ ಅಭಿವೃದ್ದಿಗೆ ಚಾಲನೆ ಹಾಗೂ ಗೊರವನಹಳ್ಳಿಯನ್ನು ನಗರಸಭೆಗೆ ಸೇರ್ಪಡೆಗೆ ವಿರೋಧಿಸಿ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಸಿಪಿಐಗಳಾದ ನವೀನ್ ಕುಮಾರ್ ಹಾಗೂ ನಾರಾಯಣಿ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನ್ನು ನಿಯೋಜಿಸಲಾಗಿತ್ತು. ನಂತರ ವೇದಿಕೆ ಕಾರ್ಯಕ್ರಮ ಶಾಂತಿಯುತವಾಗಿ ನಡೆಯಿತು.

ಗೆಜ್ಜಲಗೆರೆ, ಗೊರವನಹಳ್ಳಿ ಸೇರಿದಂತೆ ನಾಲ್ಕು ಗ್ರಾಮ ಪಂಚಾಯಿತಿಗಳ ಕೆಲವು ಗ್ರಾಮಗಳು ನಗರ ಸಭೆಗೆ ಸೇರ್ಪಡೆಯಾಗಿರುವುದರಿಂದ ಹೆಚ್ಚಿನ ಸೌಕರ್ಯಗಳು ಸಿಗಲಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ತಾಲೂಕಿನ ಗೊರವನಹಳ್ಳಿ ಗ್ರಾಮದಲ್ಲಿ ಶನಿವಾರ ೮.೧೫ ಕೋಟಿ ರೂ ವೆಚ್ಚದಲ್ಲಿ ಬಿ.ಎನ್.ರಸ್ತೆಯಿಂದ ಮರಕಾಡುದೊಡ್ಡಿ, ಗೊರವನಹಳ್ಳಿ ಮುಖಾಂತರ ಮದ್ದೂರು ಕ್ರೀಡಾಂಗಣ ಬಳಿ ಪೇಟೆಬೀದಿ ಸೇರಿರುವ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂ ಪೂಜೆ ನೆರವೇರಿಸಿದ ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ಮಾತನಾಡಿದರು.
ಗ್ರಾಮಗಳ ಅಭಿವೃದ್ಧಿಗೋಸ್ಕರ ೪ ಗ್ರಾಪಂಗಳನ್ನು ನಗರಸಭೆಗೆ ಸೇರಿಸಲಾಗಿದೆ. ಇದರಲ್ಲಿ ನನ್ನ ವೈಯಕ್ತಿಕ ಹಿತಾ ಶಕ್ತಿ ಏನೂ ಇಲ್ಲ ಎಂಬುವುದನ್ನು ಸ್ಥಳಿಯ ಗ್ರಾಮಸ್ಥರುಗಳು ಅರ್ಥಮಾಡಿಕೊಳ್ಳಬೇಕು ಎಂದ ಅವರು ಕೆಲವರು ಮಾಡುತ್ತಿರುವ ರಾಜಕೀಯ ದುರುದ್ದೇಶಗಳಿಂದ ಕೆಲವು ಮುಗ್ದ ಜನಗಳನ್ನು ದಾರಿ ತಪ್ಪಿಸುತ್ತಿದ್ದಾರೆ. ಅಂತವರ ಮಾತುಗಳಿಗೆ ಕಿವಿಗೊಡಬಾರದು ಎಂದರು.
೮ ರಿಂದ ೧೦ ಬಾರಿ ಶಾಸಕರಾಗಿರುವವರ ಕ್ಷೇತ್ರಗಳಿಗೂ ರಾಜ್ಯ ಸರ್ಕಾರ ಇಷ್ಟೊಂದು ಅನುದಾನ ನೀಡಿಲ್ಲ ಆದರೆ ಮದ್ದೂರು ಕ್ಷೇತ್ರದ ಅಭಿವೃದ್ಧಿಗಾಗಿ ನನ್ನ ಮನವಿ ಹಾಗೂ ಶ್ರಮದಿಂದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಅವರ ಕ್ಷೇತ್ರಗಳಿಗೆ ನೀಡಿದ್ದಂತೆ ಹೆಚ್ಚಿನ ಅನುದಾನಗಳನ್ನು ನೀಡುತ್ತಿರುವುದರಿಂದಾಗಿ ಕೇವಲ ಎರಡುವರೆ ವರ್ಷಗಳಲ್ಲಿ ೧೯೦೦ ಕೋಟಿ ರೂಗೂ ಹೆಚ್ಚು ಅನುದಾನವನ್ನು ತಂದು ಅಭಿವೃದ್ಧಿ ಮಾಡಲು ಸಾಧ್ಯವಾಗಿದೆ ಎಂದರು.
ನನಗೆ ಅಧಿಕಾರ ಮುಖ್ಯವಲ್ಲ. ನನ್ನ ಕ್ಷೇತ್ರವನ್ನು ಅಭಿವೃದ್ದಿ ಮಾಡುವುದಷ್ಟೆ ನನ್ನ ಗುರಿಯಾಗಿದ್ದು, ಇರುವಷ್ಟು ದಿನ ಒಳ್ಳೆಯ ಕೆಲಸಗಳನ್ನು ಮಾಡುತ್ತೇನೆ ಎಂದ ಅವರು, ಗೊರವನಹಳ್ಳಿ ನಗರಸಭೆಗೆ ಸೇರ್ಪಡೆಯಾಗಿರುವುದರಿಂದ ಗ್ರಾಮದ ಹಾಲಿನ ಡೈರಿಯಾಗಲಿ, ರೈತರ ಸೊಸೈಟಿಯಾಗಲಿ ಗ್ರಾಮದಿಂದ ಬೇರೆ ಎಲ್ಲಿಗೂ ಸ್ಥಳಾಂತರವಾಗುವುದಿಲ್ಲ ಎಂದರು.
ಮುಂದಿನ ದಿನಗಳಲ್ಲಿ ಗೊರವನಹಳ್ಳಿಯ ಅಭಿವೃದ್ದಿಗೆ ಮತ್ತಷ್ಟು ಯೋಜನೆಗಳನ್ನು ರೂಪಿಸಲಾಗುವುದು. ಅಷ್ಟೇ ಅಲ್ಲದೆ ನಗರಸಭೆಯಲ್ಲಿ ಗ್ರಾಮಸ್ಥರು ತಮ್ಮ ಅಸ್ತಿ ಬಗೆಗಿನ ಇ-ಖಾತಾ ಸೌಕರ್ಯವನ್ನು ಪಡೆದುಕೊಳ್ಳಬಹುದಾಗಿದೆ. ಈ ಹಿಂದೆ ಗ್ರಾಮಸ್ಥರು ಕಟ್ಟುತ್ತಿದ್ದ ಆಸ್ತಿ ಕಂದಾಯವನ್ನಷ್ಟೆ ಕಟ್ಟ ಬೇಕೆ ಹೊರತು ಅದಕ್ಕೂ ಹೆಚ್ಚಿನ ಕಂದಾಯ ಕಟ್ಟುವಂತಿಲ್ಲ ಎಂದು ತಿಳಿಸಿದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಲುವರಾಜು, ತಾಲೂಕು ಬ್ಲಾಕ್ ಮಹಿಳಾ ಅಧ್ಯಕ್ಷೆ ಮಮತಾಶಂಕರೇಗೌಡ, ನಗರಸಭೆ ಪೌರಾಯುಕ್ತೆ ರಾಧಿಕಾ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಮನ್ಮುಲ್ ನಿರ್ದೇಶಕ ಹರೀಶ್‌ ಬಾಬು, ಮುಖಂಡರಾದ ಅಜ್ಜಹಳ್ಳಿ ರಾಮಕೃಷ್ಣ, ಎಂ.ಡಿ.ಮಹಾಲಿಂಗಯ್ಯ, ಮೋಹನ್ಕುಮಾರ್, ರಾಘವ್, ಮಧು, ಶಿವರಾಮು, ಪುಟ್ಟಸ್ವಾಮಿ, ಬೋರೇಗೌಡ, ಶಿವರಾಮು, ಎಂ.ಡಿ.ಮಹಾಲಿಂಗಯ್ಯ, ಜವರೇಗೌಡ, ಶಿವಪ್ಪ ಇದ್ದರು

RELATED ARTICLES
- Advertisment -
Google search engine

Most Popular