Monday, September 29, 2025
Google search engine

Homeಸ್ಥಳೀಯಕ್ರೈಸ್ತರಿಗೆ ಅನುದಾನ ನೀಡುವಲ್ಲಿ ಸರ್ಕಾರದ ತಾರತಮ್ಯ: ಬಿಷಪ್ ಸುನೀಲ್ ವಿ.ಜಾಕೋಬ್ ಆರೋಪ: ಪ್ರತಿಭಟನೆ ಎಚ್ಚರಿಕೆ

ಕ್ರೈಸ್ತರಿಗೆ ಅನುದಾನ ನೀಡುವಲ್ಲಿ ಸರ್ಕಾರದ ತಾರತಮ್ಯ: ಬಿಷಪ್ ಸುನೀಲ್ ವಿ.ಜಾಕೋಬ್ ಆರೋಪ: ಪ್ರತಿಭಟನೆ ಎಚ್ಚರಿಕೆ

ಮೈಸೂರು : ಕರ್ನಾಟಕ ಸರ್ಕಾರ ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪಿಸಿ ೮ ತಿಂಗಳು ಕಳೆದಿದ್ದರೂ ಸೂಕ್ತ ಅನುದಾನ ನೀಡದೆ ಮತ್ತು ಕನಿಷ್ಠ ಜಿಲ್ಲಾ ಮಟ್ಟದಲ್ಲಿ ಕಚೇರಿಗಳನ್ನು ಪ್ರಾರಂಭಿಸದ ಕಾರಣ ಕ್ರೈಸ್ತ ಸಮುದಾಯದ ವಿದ್ಯಾರ್ಥಿಗಳು, ಸ್ವಯಂ ಉದ್ಯೋಗದ ನಿರೀಕ್ಷೆಯಲ್ಲಿರುವ ನಿರುದ್ಯೋಗಿಗಳಿಗೆ ಅನ್ಯಾಯವಾಗುತ್ತಿದೆ. ಕೂಡಲೇ ಇದನ್ನು ಸರಿಪಡಿಸದಿದ್ದಲ್ಲಿ ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರೋಟೋಸ್ಟಂಟ್ ಕ್ರೈಸ್ತರ ಮಹಾಸಭಾದ ಮೈಸೂರು ಜಿಲ್ಲಾ ಬಿಷಪ್ ಸುನೀಲ್ ವಿ.ಜಾಕೋಬ್ ಹೇಳಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕರ್ನಾಟಕ ಸರ್ಕಾರ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗದಲ್ಲಿದ್ದ ಕ್ರೈಸ್ತರನ್ನು ಕಳೆದ ೮ ತಿಂಗಳ ಹಿಂದೆ ಬೇರ್ಪಡಿಸಿ ಕ್ರೈಸ್ತ ಅಭಿವೃದ್ಧಿ ನಿಗಮಕ್ಕೆ ಸೇರಿಸಿದೆ. ಈ ನಿಗಮಕ್ಕೆ ೮೦ ಕೋಟಿ ಅನುದಾನ ಘೊಷಣೆ ಮಾಡಿದ್ದರೂ ಕೇವಲ ೪೦ ಕೋಟಿ ರೂ ಮಾತ್ರ ಬಿಡುಗಡೆ ಆಗಿದೆ ಎಂಬ ಮಾಹಿತಿಯು ಲಭ್ಯವಾಗಿದೆ. ರಾಜ್ಯದಲ್ಲಿ ಕ್ರೈಸ್ತರು ಎಲ್ಲ ತಾಲ್ಲೂಕುಗಳಲ್ಲಿ ಮತ್ತು ಜಿಲ್ಲಾ ಕೇಂದ್ರಗಳಲ್ಲಿ, ನಗರ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಮಾಡುತ್ತಿದ್ದಾರೆ.

ಈ ಪೈಕಿ ಸಾವಿರಾರು ಸಂಖ್ಯೆಯಲ್ಲಿರುವ ವಿದ್ಯಾರ್ಥಿಗಳಿಗೆ ಕಾಲಕಾಲಕ್ಕೆ ಯಾವುದೇ ವಿದ್ಯಾರ್ಥಿ ವೇತನ ದೊರಕುತ್ತಿಲ್ಲ, ನಿರುದ್ಯೋಗಿಗಳಿಗೆ ಸಾಲ ಸೌಲಭ್ಯವಾಗಲಿ, ವಿದೇಶದಲ್ಲಿ ವ್ಯಾಸಂಗಕ್ಕೆ ಅನುಕೂಲವಾಗಲಿ ಇರುವುದಿಲ್ಲ, ಅಲ್ಲದೇ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿರುವ ಇತರೆ ಸೌಲಭ್ಯವಾಗಲಿ ದೊರಕುತ್ತಿಲ್ಲ, ಸರ್ಕಾರ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ಸಾವಿರಾರು ಕೋಟಿ ರೂ ಅನುದಾನವನ್ನು ನೀಡುತ್ತಿದೆ. ಆದರೇ, ರಾಜ್ಯಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿರುವ ಕ್ರೈಸ್ತರಿಗೆ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ನೀಡದೆ ವಂಚನೆ ಮಾಡಲಾಗುತ್ತಿದೆ.

ಅಲ್ಲದೇ ಕ್ರೈಸ್ತ ಅಭಿವೃದ್ಧಿ ನಿಗಮಕ್ಕೆ ಯಾವುದೇ ಕಚೇರಿಯನ್ನೂ ನೀಡಿಲ್ಲ, ನಮ್ಮ ಮಕ್ಕಳು ಯಾವುದೇ ಸರ್ಕಾರಿ ಸೌಲಭ್ಯ ಪಡೆಯಲು ಸೂಕ್ತ ಮಾಹಿತಿಯನ್ನಾಗಲಿ ಪಡೆಯಲು ಸಾಧ್ಯವಾಗುತ್ತಿಲ್ಲ, ಯಾವುದೇ ಸೌಲಭ್ಯಕ್ಕಾಗಿ ಅರ್ಜಿ ಹಾಕಲು ವೆಬ್‌ಸೈಟ್ ಲಿಂಕ್ ಕೂಡ ಪ್ರಕಟಿಸಿಲ್ಲ, ಇದು ಸರ್ಕಾರ ಕ್ರೈಸ್ತ ಸಮುದಾಯಕ್ಕೆ ಮಾಡುತ್ತಿರುವ ಅನ್ಯಾಯ ಎಂದು ಕಿಡಿಕಾರಿದ ಅವರು, ಕೂಡಲೇ ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸಿ ಕ್ರೈಸ್ತ ಅಭಿವೃದ್ಧಿ ನಿಗಮಕ್ಕೆ ಹೆಚ್ಚು ಅನುದಾನ ಬಿಡುಗಡೆ ಮಾಡಬೇಕು, ಜಿಲ್ಲಾ ಮಟ್ಟದಲ್ಲಿ ಕಚೇರಿಗಳನ್ನು ಸ್ಥಾಪಿಸಬೇಕು, ವೆಬ್‌ಲಿಂಕ್ ಪ್ರಕಟಿಸಬೇಕು,
ಇಲ್ಲದಿದ್ದಲ್ಲಿ ನಮ್ಮನ್ನು ಮೊದಲ ರೀತಿಯಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜತೆ ಮತ್ತೆ ಸೇರ್ಪಡೆ ಮಾಡಬೇಕೆಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಆರ್ಚ್ ಬಿಷಪ್ ವಿನೋದ್ ಎಂ. ಚಾಕೋ, ಬಿಷಪ್ ಫ್ರಾನ್ಸಿಸ್ ಝೇವಿಯರ್, ಬಿಷಪ್ ಅಲೆಕ್ಸ್ ಮೈಕಲ್, ಬಿಷಪ್ ಶಿವಕುಮಾರ್, ಎಂಸಿಸಿಎಫ್ ಎಕ್ಸಿಕ್ಯೂಟೀವ್ ಬೋರ್ಡ್ ಮೆಂಬರ್ ರೆವರೆಂಡ್ ಚಲ್ಲಯ್ಯ ಇದ್ದರು.

ಒತ್ತಾಯಗಳು: ಕ್ರೈಸ್ತ ಅಭಿವೃದ್ಧಿ ನಿಗಮಕ್ಕೆ ಮೂಲಸೌಕರ್ಯ ಒದಗಿಸಬೇಕು. ನಗರ ಮತ್ತು ಜಿಲ್ಲೆಗಳ ಮಟ್ಟದಲ್ಲಿ ಕ್ರೈಸ್ತ ಅಭಿವೃದ್ಧಿ ನಿಗಮದ ಕಚೇರಿಗಳನ್ನು ಸ್ಥಾಪಿಸಬೇಕು. ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ ೧೬ ಕೊನೆ ದಿನವಾಗಿರುವ ಕಾರಣ ಅಷ್ಟರೊಳಗೆ ಕ್ರೈಸ್ತರಿಗೆ ಸೂಕ್ತ ಅನುಕೂಲ ಮಾಡಿಕೊಡಬೇಕು. ರಾಜ್ಯದ ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಸೇವೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಲಕ್ಷಾಂತರ ಕ್ರೈಸ್ತರು ಈ ರೀತಿಯ ಅನ್ಯಾಯದಿಂದ ನಿರಾಶರಾಗಿದ್ದಾರೆ.
ಅಲ್ಲಿಯ ತನಕ ಕ್ರೈಸ್ತ ಸಮುದಾಯದ ಹೆಸರನ್ನು ತಕ್ಷಣವೇ ಕೆಎಂಡಿಸಿ ವೆಬ್‌ಸೈಟ್‌ನಲ್ಲಿ ಮರುಸ್ಥಾಪಿಸಬೇಕು.

RELATED ARTICLES
- Advertisment -
Google search engine

Most Popular