ಮದ್ದೂರು: ರೈತ ಚಳವಳಿ ಪ್ರತಿಜ್ಞೆ ಮಾಡಿದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಆಳುವ ಸರ್ಕಾರ ಬದಲಾದ ನಿದರ್ಶನವಿದೆ, ರೈತರ ಹೋರಾಟಕ್ಕೆ ಅಂತಹ ಶಕ್ತಿ ಇದೆ ಎಂದು ಪ್ರಗತಿಪರ ಸಂಘಟನೆಗಳ ಮುಖಂಡ ನ.ಲಿ.ಕೃಷ್ಣ ತಿಳಿಸಿದರು.
ಪಟ್ಟಣದ ತಾಲೂಕು ರೈತ ಸಂಘ ಏರ್ಪಡಿಸಿದ್ದ ರೈತ ಹುತಾತ್ಮ ದಿನಾಚರಣೆಯಲ್ಲಿ ರೈತ ಚೇತನ ಪ್ರೊ.ನಂಜುಂಡಸ್ವಾಮಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಗುಂಡೂ ರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತರ ಮೇಲೆ ಗೋಲಿಬಾರ್ ಮಾಡಿದ ಸಂದರ್ಭದಲ್ಲಿ ರೈತರ ಆಕ್ರೋಶದ ಕಿಚ್ಚು ಎಲ್ಲಡೆ ಹರಡಿ ಸರ್ಕಾರ ಕಿತ್ತೊಗೆಯುವ ಪ್ರತಿಜ್ಞೆ ಮಾಡಲಾಯಿತು, ಅದರ ಫಲವಾಗಿ ಜನತಾ ಸರ್ಕಾರ ಅಸ್ತಿತ್ವಕ್ಕೆ ಬಂದ ನಿದರ್ಶನವನ್ನು ಕಂಡಿದ್ದೇವೆ ಎಂದು ಹೇಳಿದರು.
ಚುನಾವಣೆ ಸಂದರ್ಭದಲ್ಲಿ ರಾಮಕೃಷ್ಣ ಹೆಗಡೆ ಕನಕಪುರದಲ್ಲಿ ರೈತರ ಶಾಲು ತಂದೆ ಇದ್ದಂತೆ, ರೈತ ಸಂಘದ ಹೆಸರು ತಾಯಿ ಇದ್ದಂತೆ ಎಂದು ಹೇಳಿದ್ದರು, ಆದರೆ ಅವರ ಸರ್ಕಾರದ ಅವಧಿಯಲ್ಲಿಯೂ ರೈತರ ಮೇಲೆ ಗೋಲಿಬಾರ್ ನಡೆದದ್ದು, ಮರೆಯುವಂತಿಲ್ಲ ಎಂದು ಹೇಳಿದರು.
ನರಗುಂದ – ನವಲಗುಂದದಲ್ಲಿ ರೈತರ ಮೇಲೆ ನಡೆದ ಗೋಲಿಬಾರ್ ಹೋರಾಟದ ಹೊಸ ಕಿಚ್ಚಿಗೆ ಕಾರಣವಾಯಿತು. ರೈತರೆಲ್ಲ ಒಗ್ಗೂಡಿ ಸಂಘಟಿತರಾಗಿ ರೈತ ಸಂಘ ಉದಯವಾಯಿತು, 43 ವರ್ಷಗಳ ಹಿಂದೆ ಗೋಲಿಬಾರ್ ನಲ್ಲಿ ಮಾಡಿದ ರೈತರ ಸ್ಮರಣಾರ್ಥ ಹುತಾತ್ಮ ದಿನವನ್ನು ಆಚರಣೆ ಮಾಡಲಾಗುತ್ತಿದ್ದು, ಇದೊಂದು ರೈತರ ಹೋರಾಟಕ್ಕೆ ಪ್ರೇರೆಣೆಯಾಗಿದೆ ಎಂದು ಹೇಳಿದರು.
ಗೆಜ್ಜಲಗೆರೆಯಲ್ಲಿಯೂ ರೈತರ ಮೇಲೆ ಗೋಲಿಬಾರ್ ನಡೆದು ನಾಥಪ್ಪ ಮತ್ತು ವಳಗೆರಹಳ್ಳಿ ಸಿದ್ದಪ್ಪ ಹುತಾತ್ಮರಾಗಿದ್ದರು, ಅವರನ್ನು ಕೂಡ ಈ ಸಂದರ್ಭದಲ್ಲಿ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
