ಗದಗ: ರಾಜ್ಯ ಸರ್ಕಾರ ಅಲ್ಪಸಂಖ್ಯಾತ ಸಮುದಾಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಪ್ರಾಮುಖ್ಯತೆ ನೀಡುತ್ತಿದೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಗದಗ ಜಿಲ್ಲೆಯಲ್ಲಿ ಕರ್ನಾಟಕ ಮೌಲಾನಾ ಅಜಾದ್ ಪಬ್ಲಿಕ್ ಸ್ಕೂಲ್ ನ ಹೊಸ ಕಟ್ಟಡ ಉದ್ಘಾಟನೆ ಮತ್ತು ಗಂಗಿಮಡಿಯಲ್ಲಿ ಹೆಚ್ಚುವರಿ ತರಗತಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಮಾತನಾಡಿದ ಅವರು, ಅಲ್ಪಸಂಖ್ಯಾತ ಸಮುದಾಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಸರ್ಕಾರ ಪ್ರಾಮುಖ್ಯತೆ ನೀಡುತ್ತಿದೆ. ಅದರಂತೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ರೂ.4,500 ಕೋಟಿ ಅನುದಾನವನ್ನು ಮಂಜೂರು ಮಾಡಿದ್ದು, ಈ ಅನುದಾನದ ಹೆಚ್ಚಿನ ಭಾಗವನ್ನು ಮಕ್ಕಳ ಶಿಕ್ಷಣಕ್ಕೆ ಬಳಸಲಾಗುತ್ತಿದೆ ಎಂದು ತಿಳಿಸಿದರು.
ಮುಂದುವರೆದು ರಾಜ್ಯಾದ್ಯಂತ 2.38 ಲಕ್ಷಕ್ಕೂ ಹೆಚ್ಚು ಮಕ್ಕಳು ವಸತಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ಹಲವು ವಸತಿ ಶಾಲೆಗಳು ಆರಂಭವಾಗಿವೆ. ಅಲ್ಲದೆ ಈಗ ಹೆಚ್ಚುವರಿಯಾಗಿ 100 ವಸತಿ ಶಾಲೆಗಳನ್ನು ಸ್ಥಾಪಿಸಲಾಗುತ್ತಿದೆ. 100 ಮದ್ರಾಸಗಳಲ್ಲಿ 9 ಮತ್ತು 10 ನೇ ತರಗತಿಯಲ್ಲಿ ಓದುತ್ತಿರುವ ಸುಮಾರು 5,000 ಮಕ್ಕಳು ಉತ್ತೀರ್ಣರಾಗುತ್ತಿದ್ದಾರೆ. ಈ ಮಕ್ಕಳು ಮದ್ರಾಸಗಳಲ್ಲಿಯೂ ಉತ್ತಮ ಶಿಕ್ಷಣ ಪಡೆಯಬೇಕೆಂಬ ಕಾಳಜಿಯೊಂದಿಗೆ ಸರ್ಕಾರ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಇನ್ನೂ ಸಣ್ಣ ಅನುದಾನದಲ್ಲಿ ಗುಣಮಟ್ಟದ ಮತ್ತು ವಿಶಾಲವಾದ ಕಟ್ಟಡವನ್ನು ನಿರ್ಮಿಸಲಾಗಿದೆ ಎಂಬುದು ಸಂತೋಷದ ವಿಷಯ. ಈ ಯೋಜನೆಗಾಗಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಸಚಿವ ಹೆಚ್.ಕೆ.ಪಾಟೀಲ್ ಅವರ ಸಹಕಾರವೂ ಶ್ಲಾಘನೀಯ ಎಂದು ಹೇಳಿದರು.



