ಚಿಕ್ಕಮಗಳೂರು: ಸರ್ಕಾರ ತಮಿಳುನಾಡಿಗೆ ನೀರು ಬಿಡುತ್ತಿದ್ದು, ಸರ್ಕಾರ ಕರ್ನಾಟಕದ ಜನರನ್ನು ಬಲಿ ಕೊಡುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರದಲ್ಲೇ ಬೇಕಾದಷ್ಟು ನೀರನ್ನು ಬಿಡುತ್ತಿಲ್ಲ. ಒಂದೆಡೆ ನೀರು, ವಿದ್ಯುತ್ ಇಲ್ಲ. ಮತ್ತೊಂದೆಡೆ ಮಳೆಯೂ ಬಂದಿಲ್ಲ. ಮಂಡ್ಯ, ಮೈಸೂರು, ಬೆಂಗಳೂರು ಕಡೆ ಕುಡಿಯುವ ನೀರಿಗೆ ಸಮಸ್ಯೆಯಿದೆ. ಆದರೂ, ರಾಜ್ಯ ಸರ್ಕಾರ ಜನರ ದೃಷ್ಟಿಯಲ್ಲಿ ಯೋಚನೆ ಮಾಡುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.
ನಮ್ಮ ರಾಜ್ಯದಲ್ಲಿ ಮುಂಗಾರು ಮಳೆ ಸರಿಯಾಗಿ ಬಂದಿಲ್ಲ ಎಂಬುವುದನ್ನು ತಮಿಳುನಾಡಿಗೆ ಮನವರಿಕೆ ಮಾಡಿಲ್ಲ. I N D A ದಲ್ಲಿ ಇದ್ದಾರೆ ಎಂಬ ಒತ್ತಡದಲ್ಲಿ ನೀರು ಬಿಟ್ಟರೆ, ರಾಜ್ಯದ ರೈತರು ಮತ್ತು ಬೆಂಗಳೂರಿನ ಜನಕ್ಕೆ ನೀರಿನ ಸಮಸ್ಯೆ ಬರುತ್ತದೆ. ಕೇವಲ ಅವರವರ ಒಳಗಿನ ರಾಜಕೀಯದ ಕಾರಣಕ್ಕಾಗಿ ಕರ್ನಾಟಕದ ಜನರನ್ನು ಬಲಿ ಕೊಡುವ ಕೆಲಸ ಮಾಡುತ್ತಿದೆ. ಟೀಮ್ ಕಳಿಸಿ ಪರಿಶೀಲನೆ ನಡೆಸಿ ಎಂದು ಗಟ್ಟಿಯಾದ ದ್ವನಿ ಸರ್ಕಾರದ ಕಡೆಯಿಂದ ಬರುತ್ತಿಲ್ಲ. ಕಾವೇರಿ ನದಿ ಮತ್ತು ಜಲಾಶಯಗಳಲ್ಲಿ ನೀರಿಲ್ಲ ಎಂದು ಸರ್ಕಾರ ಹೇಳುತ್ತಿಲ್ಲ ಎಂದು ಸಚಿವೆ ಶೋಭಾ ಕರಂದ್ಲಾಜೆ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.