ಚಾಮರಾಜನಗರ:ನಗರದ ಸರ್ಕಾರಿ ಕಾನೂನು ಕಾಲೇಜನ್ನು 2023-24ನೇ ಶೈಕ್ಷಣಿಕ ಸಾಲಿಗೆ ಪ್ರಾರಂಭಿಸುವ ಸಂಬಂಧ ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾಲಯದ ಸ್ಥಾನಿಕ ಪರಿಶೀಲನಾ ಸಮಿತಿ ತಂಡವು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರೊಂದಿಗೆ ಇಂದು ಪರಿಶೀಲನೆ ನಡೆಸಿತು.ಸ್ಥಾನಿಕ ಪರಿಶೀಲನಾ ಸಮಿತಿಯ ಅಧ್ಯಕ್ಷರು ಹಾಗೂ ಉಡುಪಿಯ ವೈಕುಂಠಬಾಳಿಗ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಕೆ.ಎಸ್. ರಘುನಾಥ್, ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಮಂಡ್ಯ ಪಿ.ಇ.ಎಸ್. ಕಾನೂನು ಕಾಲೇಜಿನ ಸಹಾಯಕ ಪ್ರೊಫೆಸರ್ ಕೆ.ಎಸ್. ಜಯಕುಮಾರ್, ಸಮಿತಿಯ ಸದಸ್ಯರಾದ ಹುಬ್ಬಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಸಹಾಯಕ ಪ್ರೊಫೆಸರ್ ಹಾಗೂ ಸಹಾಯಕ ಕುಲಸಚಿವರಾದ ಡಾ. ಸುನೀಲ್ ಬಾಗಡೆ ಅವರನ್ನು ಒಳಗೊಂಡ ತಂಡ ಇಂದು ಕಾನೂನು ಕಾಲೇಜಿಗೆ ಸಿದ್ದತೆ ಮಾಡಲಾಗಿರುವ ನಗರದ ರೇಷ್ಮೆ ಇಲಾಖೆಗೆ ಸೇರಿದ ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲಿಸಿತು.ಆರಂಭದಲ್ಲಿಯೇ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರೊಂದಿಗೆ ಕಾಲೇಜಿನ ಪ್ರಾಂಶುಪಾಲರ ಕಚೇರಿಯಲ್ಲಿ ಸ್ಥಾನಿಕ ಪರಿಶೀಲನಾ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ವಿವರವಾಗಿ ಚರ್ಚಿಸಿದರು. ಬಳಿಕ ಕಾಲೇಜು ಕಟ್ಟಡದಲ್ಲಿ ತರಗತಿ ಕೊಠಡಿಗಳು, ಬೋಧಕರ ಕೊಠಡಿ, ಗ್ರಂಥಾಲಯ, ಇನ್ನಿತರ ಮೂಲ ಸೌಕರ್ಯಗಳನ್ನು ಪರಿಶೀಲಿಸಿದರು.ಕೊಠಡಿಯಲ್ಲಿ ಲಭ್ಯವಿರುವ ಮೇಜು, ಕುರ್ಚಿ, ಇತರೆ ಪೀಠೋಪಕರಣಗಳನ್ನು ವೀಕ್ಷಿಸಿ ಇನ್ನೂ ಅಗತ್ಯವಿರುವ ಪೀಠೋಪಕರಣಗಳು ಸೇರಿದಂತೆ ಬೇಕಿರುವ ಪರಿಕರಗಳ ಕುರಿತು ಸಮಿತಿ ಅಗತ್ಯ ಸೂಚÀನೆಗಳನ್ನು ನೀಡಿತು.ಇದೇ ವೇಳೆ ಮಾತನಾಡಿದ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಸರ್ಕಾರಿ ಕಾನೂನು ಕಾಲೇಜಿಗೆ ಪ್ರಸ್ತುತ ತಾತ್ಕಾಲಿಕವಾಗಿ ಇಲ್ಲಿಯೇ ಕಟ್ಟಡವಿದೆ. ಕಾಲೇಜಿಗೆ ಅವಶ್ಯವಿರುವ ಕಂಪ್ಯೂಟರ್, ಹೆಚ್ಚುವರಿ ಪೀಠೋಪಕರಣ, ಗ್ರಂಥಾಲಯಕ್ಕೆ ಬೇಕಿರುವ ಪುಸ್ತಕಗಳು, ಇತರೆ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು. ಈ ಶೈಕ್ಷಣಿಕ ಸಾಲಿನಲ್ಲಿಯೇ ಕಾನೂನು ಕಾಲೇಜು ಆರಂಭಕ್ಕೆ ಬೇಕಿರುವ ಎಲ್ಲ ನೆರವನ್ನು ದೊರಕಿಸಿಕೊಡಲಾಗುವುದು ಎಂದರು.
ಕಾನೂನು ಕಾಲೇಜು ಸ್ವಂತ ಕಟ್ಟಡಕ್ಕಾಗಿ ಯಡಪುರದಲ್ಲಿ ನಾಲ್ಕು ಎಕರೆ ಜಾಗ ನೀಡಲಾಗಿದೆ. ಇಲ್ಲಿಯೇ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ. ಕಟ್ಟಡ ನಿರ್ಮಾಣವಾಗುವವರೆಗೆ ತಾತ್ಕಾಲಿಕವಾಗಿ ಇಲ್ಲಿಯ ರೇಷ್ಮೆ ಇಲಾಖೆಯ (ಹಿಂದಿನ ಕೇಂದ್ರೀಯ ವಿದ್ಯಾಲಯ) ಕಟ್ಟಡದಲ್ಲಿ ಕಾನೂನು ಕಾಲೇಜು ನಡೆಸಲು ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.ಸ್ಥಾನಿಕ ಪರಿಶೀಲನಾ ಸಮಿತಿಯ ಅಧ್ಯಕ್ಷರಾದ ಕೆ.ಎಸ್. ರಘುನಾಥ್ ಅವರು ಮಾತನಾಡಿ ಕಾನೂನು ಕಾಲೇಜು ಆರಂಭಿಸುವ ಸಂಬಂಧ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಸೂಚನೆ ಮೇರೆಗೆ ಕಾಲೇಜು ಕಟ್ಟಡ ಪರಿಶೀಲಿಸಲಾಗಿದೆ. ಕಾಲೇಜಿಗೆ ಇನ್ನಷ್ಟು ಮೂಲ ಸೌಲಭ್ಯಗಳು ಮೇಲ್ದರ್ಜೆಗೆ ಏರಬೇಕಿದೆ. ಈ ಬಗ್ಗೆ ಅಗತ್ಯ ನಿರ್ದೇಶನ ನೀಡಿದ್ದೇವೆ. ಶಾಸಕರು ಕಾಲೇಜು ಆರಂಭಕ್ಕೆ ಅಗತ್ಯವಿರುವ ಎಲ್ಲ ಮೂಲ ಸೌಕರ್ಯ ಕಲ್ಪಿಸುವುದಾಗಿ ತಿಳಿಸಿದ್ದಾರೆ ಎಂದರು.2023-24ನೇ ಶೈಕ್ಷಣಿಕ ಸಾಲಿನಿಂದಲೇ ಮೂರು ವರ್ಷಗಳ ಕಾನೂನು ಪದವಿ ತರಗತಿಗಳನ್ನು ಆರಂಭಿಸಬಹುದಾಗಿದೆ. ಆದರೆ ಇದಕ್ಕೂ ಮೊದಲು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಪರಿಶೀಲಿಸಿ ಅನುಮತಿ ನೀಡುವುದು ಅಗತ್ಯವಾಗಿದೆ. ಕಾಲಮಿತಿಯೊಳಗೆ ಎಲ್ಲ ಸಿದ್ದತೆಗಳನ್ನು ಪೂರ್ಣಗೊಳಿಸಿಕೊಳ್ಳಬೇಕು ಎಂದು ಸ್ಥಾನಿಕ ಪರಿಶೀಲನಾ ಸಮಿತಿಯ ಅಧ್ಯಕ್ಷರಾದ ಕೆ.ಎಸ್. ರಘುನಾಥ್ ಅವರು ತಿಳಿಸಿದರು.ಸರ್ಕಾರಿ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾ. ಎ. ಗೋಪಾಲ, ಎಪಿಎಂಸಿ ಯ ಮಾಜಿ ಅಧ್ಯಕ್ಷರಾದ ಬಿ.ಕೆ. ರವಿಕುಮಾರ್, ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.