ಬೆಂಗಳೂರು: ರಾಜ್ಯದಲ್ಲಿರುವ 4,056 ಸರಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ತರಗತಿಗಳಾದ ಎಲ್‌ಕೆಜಿ, ಯುಕೆಜಿಯನ್ನು ಆರಂಭಿಸಲಾಗುತ್ತಿದೆ ಎಂದು ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಪ್ರಸಕ್ತ ವರ್ಷದಿಂದಲೇ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ 1,105 ಶಾಲೆಗಳು, 126 ಪಿ.ಎಂ.ಶ್ರೀ ಶಾಲೆಗಳು ಮತ್ತು ಕೆ.ಕೆ.ಆರ್.ಡಿ.ಬಿ. ಯೋಜನೆಯಡಿ 1,126 ಶಾಲೆಗಳು ಮತ್ತು 1699 ಮ್ಯಾಗ್ನೆಟ್ ಶಾಲೆಗಳು ಸೇರಿ 4,056 ಸರಕಾರಿ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣವನ್ನು ಆರಂಭಿಸಲಾಗುತ್ತಿದೆ.
ಪ್ರಸ್ತುತ ಸರಕಾರಿ ಶಾಲೆಗಳಲ್ಲಿ ನಡೆಸಲಾಗುತ್ತಿರುವ ಪೂರ್ವ ಪ್ರಾಥಮಿಕ ತರಗತಿಗಳನ್ನು ತರಗತಿವಾರು ಪ್ರತ್ಯೇಕವಾಗಿ ದ್ವಿಭಾಷಾ ಮಾಧ್ಯಮದಲ್ಲಿ ನಡೆಸಲು ಕ್ರಮವಹಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಎಲ್‌ಕೆಜಿ, ಯುಕೆಜಿ ಅಭ್ಯಾಸ ಪುಸ್ತಕಗಳನ್ನು ವಿತರಿಸಲಾಗುವುದು. ಪೂರ್ವ ಪ್ರಾಥಮಿಕ ತರಗತಿಗಳನ್ನು ಬೆಳಗ್ಗೆ 10 ರಿಂದ ಮಧ್ಯಾಹ್ನ 3.30ರವರೆಗೆ ನಡೆಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ.
ಪೂರ್ವ ಪ್ರಾಥಮಿಕ ತರಗತಿಗಳನ್ನು ನಡೆಸಲು ಅಗತ್ಯ ಮೂಲಭೂತ ಸೌಕರ್ಯ ಮತ್ತು ಕಲಿಕಾ ಸೌಕರ್ಯಗಳನ್ನು ನಿಯಮಾನುಸಾರ ಒದಗಿಸಲು ಉಪನಿರ್ದೇಶಕರು(ಆಡಳಿತ) ಇವರಿಗೆ ಸೂಕ್ತ ನಿರ್ದೇಶನ ನೀಡುತ್ತಾರೆ. ಪೂರ್ವ ಪ್ರಾಥಮಿಕ ತರಗತಿಯನ್ನು ಪ್ರಾರಂಭಿಸಲು ಒಂದು ಕೊಠಡಿಯನ್ನು ಗುರುತಿಸಿ ಸಜ್ಜುಗೊಳಿಸಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಆದೇಶದಲ್ಲಿ ಹೇಳಿದೆ.
ಪ್ರಸ್ತುತ 2,619 ಸರಕಾರಿ ಶಾಲೆಗಳ ಪೂರ್ವ ಪ್ರಾಥಮಿಕ ತರಗತಿಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಒಟ್ಟು 90,195 ವಿದ್ಯಾರ್ಥಿಗಳು ದಾಖಲಾಗಿರುತ್ತಾರೆ. ಈ ಯೋಜನೆಯನ್ನು 70 ಕೋಟಿ ರೂ. ವೆಚ್ಚದಲ್ಲಿ ಒಟ್ಟಾರೆ 5,000 ಶಾಲೆಗಳಿಗೆ ವಿಸ್ತರಿಸಲಾಗುವುದು ಎಂದು ಈ ವರ್ಷದ ಬಜೆಟ್‌ನಲ್ಲಿ ತಿಳಿಸಲಾಗಿತ್ತು ಅದರಂತೆ ರಾಜ್ಯ ಸರಕಾರವು ಈ ಆದೇಶ ಹೊರಡಿಸಿದೆ.



