ಬೆಂಗಳೂರು: ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಹಾಗೂ ಇಸ್ರೋ ಮಾಜಿ ಮುಖ್ಯಸ್ಥರು, ಪದ್ಮವಿಭೂಷಣ ಪುರಸ್ಕೃತ ಡಾ. ಕೆ. ಕಸ್ತೂರಿ ರಂಗನ್ ಅವರು ನಿನ್ನೆ (25.04.2025) ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೊಡಿಗೇನಹಳ್ಳಿಯಲ್ಲಿನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.
ಕಸ್ತೂರಿ ರಂಗನ್ ಅವರ ಅಂತ್ಯಕ್ರಿಯೆಯನ್ನು ಸರ್ಕಾರವು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ನಿರ್ಧರಿಸಿದ್ದು, ಈ ಕುರಿತು ಸಿಬ್ಬಂದಿ ಆಡಳಿತ ಇಲಾಖೆ ಅಧೀನ ಕಾರ್ಯದರ್ಶಿ ಬಾಣದರಂಗಯ್ಯ ಅವರು ರಾಜ್ಯಪಾಲರ ಆದೇಶದಂತೆ ಸೂಚನೆ ನೀಡಿದ್ದಾರೆ.
ಇಸ್ರೋ ಅಧ್ಯಕ್ಷರಾಗಿ 1994ರಿಂದ 2003ರವರೆಗೆ ಸೇವೆ ಸಲ್ಲಿಸಿದ ಅವರು ಭಾರತದಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ.
ಭಾನುವಾರ ಬೆಳಿಗ್ಗೆ 10ರಿಂದ 12ರ ವರೆಗೆ ರಾಮನ್ ಸಂಶೋಧನಾ ಸಂಸ್ಥೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಅಂತ್ಯಕ್ರಿಯೆ ನೆರವೇರಲಿದೆ.