ಚನ್ನಪಟ್ಟಣ: ನೀರಿನ ಹಾಹಾಕಾರ ಎದುರಾಗುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್‌ಗೌಡ ಅಭಿಪ್ರಾಯಿಸಿದರು.
ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ಸಂಕಷ್ಟ ಸೂತ್ರ ರಚಿಸುವ ಜೊತೆಗೆ ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷರಾದ ರಮೇಶ್‌ಗೌಡರ ನೇತೃತ್ವದಲ್ಲಿ ನಿರಂತರವಾಗಿ ಹೋರಾಟ ಮಾಡುತ್ತಿದ್ದು ಸೋಮವಾರ ನಡೆದ ೧೨೪ ನೇ ದಿನದ ಹೋರಾಟದಲ್ಲಿ ಮಾತನಾಡಿದ ಅವರು ತಮಿಳುನಾಡಿಗೆ ನೀರು ಬಿಡುವ ವಿಚಾರದಲ್ಲಿ ತಾತ್ಕಾಲಿಕವಾಗಿ ಮುಕ್ತಿ ಸಿಕ್ಕಿದೆಯಾದರೂ ತಮಿಳುನಾಡು ಮತ್ತೆ ನೀರಿಗೆ ಅರ್ಜಿ ಹಾಕುವ ಹುನ್ನಾರದಲ್ಲಿದ್ದು, ಈ ಬಗ್ಗೆ ಸರ್ಕಾರ ಹೆಚ್ಚು ಗಮನ ನೀಡಬೇಕು.
ಅಧಿಕಾರಿಗಳು ಮತ್ತು ವಕೀಲರು ರಾಜ್ಯದ ಜಲಾಶಯಗಳ ನೀರಿನ ಲಭ್ಯತೆಯ ಸಂಪೂರ್ಣ ವರದಿಯನ್ನು ಸಂಗ್ರಹಿಸಿ ಪ್ರಾಧಿಕಾರದ ಮುಂದಿಡಲು ಸಿದ್ದತೆ ಮಾಡಿಕೊಳ್ಳಬೇಕು, ಈ ವೇಳೆಗೆ ಜಲಾಶಯಗಳಲ್ಲಿ ಇರುವ ನೀರನ್ನು ಕುಡಿಯುವ ನೀರಿಗೆ ಬಳಕೆ ಮಾಡಿಕೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಜನ-ಜಾನುವಾರುಗಳಿಗೆ ನೀರಿನ ಅವಶ್ಯಕತೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಜಲಾಶಯದ ನೀರನ್ನು ಸದ್ಬಳಕೆ ಮಾಡಿಕೊಂಡು ನೀರಿನ ಬವಣೆ ನಿವಾರಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳ ಮೂಲಕ ಕ್ರಮ ಕೈಗೊಳ್ಳಬೇಕು ಎಂದು ರಮೇಶ್‌ಗೌಡ ಮಾತನಾಡಿದರು.
ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ ಮಾತನಾಡಿ, ಈಗಾಗಲೆ ಕಾವೇರಿಕೊಳ್ಳದಲ್ಲಿ ಸರಬರಾಜು ಮಾಡುತ್ತಿರುವ ಕುಡಿಯುವ ನೀರನ್ನು ೪ ದಿನಗಳಿಗೆ ಒಮ್ಮೆ ನಿಗಧಿ ಮಾಡಿದ್ದಾರೆ. ಮುಂದೆ ವಾರಕ್ಕೆ ಒಮ್ಮೆ ನೀಡಿ ತಿಂಗಳಾನುಗಟ್ಟಲೆ ನೀರಿಲ್ಲ ಎಂದು ಸಂಪೂರ್ಣವಾಗಿ ಸ್ಥಗಿತ ಮಾಡಿದರೂ ಅಚ್ಚರಿ ಇಲ್ಲ. ಈ ನಿಟ್ಟಿನಲ್ಲಿ ರಾಜ್ಯದ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಮೇಕೆದಾಟು ಯೋಜನೆಗೆ ಕೇಂದ್ರದ ಮಧ್ಯಸ್ಥಿಕೆಗೆ ಒತ್ತಾಯ ಮಾಡಬೇಕು, ಮೇಕೆದಾಟು ಯೋಜನೆಯಲ್ಲಿ ರಾಜಕಾರಣ ಮಾಡದೆ ಕನ್ನಡಿಗರ ಹಿತ ಕಾಯಬೇಕು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಉಪಾಧ್ಯಕ್ಷರುಗಳಾದ ಬೆಳಕು ಶ್ರೀಧರ್, ರಂಜಿತ್‌ಗೌಡ, ಶ್ಯಾಮ್, ನಿವೃತ್ತ ಸರ್ಕಾರಿ ನೌಕರ ರಾಜಣ್ಣ, ಕುಕ್ಕೂರುದೊಡ್ಡಿ ದುರ್ಗೇಗೌಡ, ಹೆಚ್.ಹೆಚ್.ಹಳ್ಳಿ ರಮೇಶ್, ಮೆಣಸಿಗನಹಳ್ಳಿ ರಾಮಕೃಷ್ಣ, ಚಿಕ್ಕೇನಹಳ್ಳಿ ಸಿದ್ದಪ್ಪಾಜಿ ಸೇರಿದಂತೆ ಇತರರು ಇದ್ದರು.