ಚಾಮರಾಜನಗರ: ಗಡಿ ಪ್ರದೇಶ ಚಾಮರಾಜನಗರದಲ್ಲಿ ಕೈಗಾರಿಕೆಗೆ ಬಂಡವಾಳ ಹೂಡಿಕೆ ಮಾಡುವವರಿಗೆ ನಮ್ಮ ಸರ್ಕಾರ ಪ್ರೋತ್ಸಾಹ ನೀಡಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು ತಿಳಿಸಿದರು.
ಚಾಮರಾಜನಗರದಲ್ಲಿ ಎಲ್ ಇಪಿ ಬ್ಯಾಟರಿ ಉತ್ಪಾದನೆ ಘಟಕ ಭೂಮಿಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ನಾನು ಇಂಧನ ಸಚಿವನಾಗಿದ್ದಾಗ ಸೋಲಾರ್ ಪಾರ್ಕ್ ಮಾಡಿ ವಿಶ್ವದ ಗಮನ ಸೆಳೆದಿದ್ದೆ. ನಮ್ಮ ಮಾದರಿಯನ್ನು ಇಡೀ ದೇಶ ಮೆಚ್ಚಿ ಕೇಂದ್ರ ಸರ್ಕಾರ ಎಲ್ಲಾ ತಾಲೂಕುಗಳಲ್ಲಿ ಸೌರಶಕ್ತಿ ಯೋಜನೆ ಜಾರಿಗೆ ತಂದಿದ್ದಾರೆ. ಟ್ರಾನ್ಸ್ ಮಿಷನ್ ನಲ್ಲಿ ವೆಚ್ಚ ಉಳಿತಾಯ ಮಾಡುವಲ್ಲಿ ಕರ್ನಾಟಕ ಮಾದರಿ ದೇಶಕ್ಕೆ ಮಾದರಿಯಾಗಿತ್ತು ಎಂದು ತಿಳಿಸಿದರು.
ಈಗ ವಿದ್ಯುತ್ ಶೇಖರಣೆ ಬಗ್ಗೆ ಕೆಲಸ ಮಾಡಲಾಗುತ್ತಿದೆ. ಖಾಸಗಿ ಕಂಪನಿ ಸುಮಾರು 2 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಲು ಮುಂದಾಗಿದ್ದು, ಮೊದಲ ಹಂತದಲ್ಲಿ 500 ಕೋಟಿಯನ್ನು ಇಲ್ಲಿ ಹೂಡಿಕೆ ಮಾಡಿ ಬ್ಯಾಟರಿ ಉತ್ಪಾದನಾ ಘಟಕ ನಿರ್ಮಾಣ ಮಾಡುತ್ತಿದ್ದಾರೆ. ಇದಕ್ಕೆ ಉತ್ತೇಜನ ನೀಡಲು ಇಲ್ಲಿಗೆ ಬಂದಿದ್ದೇನೆ ಎಂದರು.

ರೇಣುಕಾಚಾರ್ಯ ಅವರ ಭೇಟಿ ಬಗ್ಗೆ ಕೇಳಿದಾಗ, “ನಮಗೆ ಆಪರೇಷನ್ ಹಸ್ತದ ಅಗತ್ಯವಿಲ್ಲ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಸೇರಲು ಬಯಸುವವರನ್ನು ತಡೆವುದಿಲ್ಲ. ನಮ್ಮ ಪಕ್ಷಕ್ಕೆ ಬಲತುಂಬುವವರು, ನಮ್ಮ ಮೇಲೆ ವಿಶ್ವಾಸ ಇಡುವವರನ್ನು ನಾವು ಪಕ್ಷಕ್ಕೆ ಸ್ವಾಗತಿಸುತ್ತೇವೆ” ಎಂದು ತಿಳಿಸಿದರು.
ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣ ಸಂತ್ರಸ್ತರಿಗೆ ಈವರೆಗೂ ನ್ಯಾಯ ಸಿಕ್ಕಿಲ್ಲ ಎಂಬ ಪ್ರಶ್ನೆಗೆ, “ನಾನು ಮತ್ತು ಮುಖ್ಯಮಂತ್ರಿಗಳು ಮೆಡಿಕಲ್ ಶಿಕ್ಷಣ ಸಚಿವರಿಗೆ ಸೂಚನೆ ನೀಡಿ, ಮೆಡಿಕಲ್ ಕಾಲೇಜಿನಲ್ಲಿ ಈ ಸಂತ್ರಸ್ತ ಕುಟುಂಬ ಸದಸ್ಯರಿಗೆ ನ್ಯಾಯ ಒದಗಿಸಿಕೊಡಲು ತಿಳಿಸಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರಿಗೂ ಈ ಬಗ್ಗೆ ಸೂಚನೆ ನೀಡಿದ್ದೇವೆ” ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಚುನಾವಣೆ ಸೋತ ನಂತರ ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರಿಗೆ ಮನ್ನಣೆ ನೀಡುತ್ತಿಲ್ಲ ಎಂಬ ಟ್ವೀಟ್ ವಿಚಾರವಾಗಿ ಪ್ರಶ್ನೆ ಕೇಳಿದಾಗ, “ಅವರಿಗೆ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರಧಾನಮಂತ್ರಿ ಕಚೇರಿಯ ಸಂದೇಶವೇ ಬಿಜೆಪಿ ನಾಯಕ ಆರ್. ಅಶೋಕ್ ಗೆ ಗೊತ್ತಿಲ್ಲ. ಅಷ್ಟರ ಮಟ್ಟಿಗೆ ಅವರನ್ನು ಲೆಕ್ಕಕ್ಕೆ ಇಟ್ಟಿಲ್ಲ” ಎಂದು ತಿರುಗೇಟು ನೀಡಿದರು.