ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿ.ವಿ. ಕುಲಪತಿ ನೇಮಕ ವಿಷಯವು ಸರಕಾರ ಮತ್ತು ರಾಜಭವನದ ನಡುವೆ ತೀಕ್ಷ್ಣ ಪತ್ರ ಸಮರಕ್ಕೆ ಕಾರಣವಾಗಿದ್ದು, ಒಂದು ತಿಂಗಳೊಳಗೆ ಕುಲಪತಿ ನೇಮಕ ಪ್ರಕ್ರಿಯೆ ನಡೆಸದಿದ್ದರೆ ತಾನೇ ಅರ್ಜಿ ಕರೆದು ಪ್ರಕ್ರಿಯೆ ಪ್ರಾರಂಭಿಸಬೇಕಾಗುತ್ತದೆ ಎಂದು ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಎಚ್ಚರಿಕೆ ನೀಡಿದ್ದಾರೆ.
ರಾಜ್ಯಪಾಲರು ಮುಖ್ಯಮಂತ್ರಿಯವರಿಗೆ ಮಾ. 28ರಂದೇ ಬರೆದ ಪತ್ರ ಈಗ ಬೆಳಕಿಗೆ ಬಂದಿದೆ. ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಇಲಾಖೆಯ ಕಾರ್ಯ ವೈಖರಿ ಬಗ್ಗೆಯೂ ಈ ಪತ್ರದಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದ್ದು, ಹಾಲಿ ಅಸ್ತಿತ್ವದಲ್ಲಿರುವ ಕಾಯ್ದೆಯ ಪ್ರಕಾರವೇ ಒಂದು ತಿಂಗಳೊಳಗಾಗಿ ಅರ್ಜಿ ಕರೆದು ಕುಲಪತಿ ನೇಮಕಕ್ಕೆ ಕ್ರಮ ತೆಗೆದುಕೊಳ್ಳಿ. ಇಲ್ಲವಾದರೆ ತಾನು ಕಠಿನ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಕಾನೂನು ಪ್ರಕಾರ ತಾನೇ ಅರ್ಜಿ ಕರೆದು ಕುಲಪತಿ ನೇಮಕ ಪ್ರಕ್ರಿಯೆ ನಡೆಸಬೇಕಾಗುತ್ತದೆ ಎಂದು ರಾಜ್ಯಪಾಲರು ಎಚ್ಚರಿಕೆ ನೀಡಿದ್ದಾರೆ. ಸಿಎಂ ಕಚೇರಿಯಿಂದ ಈ ಪತ್ರಕ್ಕೆ ಇನ್ನೂ ಉತ್ತರ ಕಳುಹಿಸಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ.
ಪತ್ರದಲ್ಲಿ ಏನಿದೆ ?
ಗದಗದ ಗ್ರಾಮೀಣಾಭಿವೃದ್ಧಿ ಹಾಗೂ ಪಂ. ರಾಜ್ ವಿ.ವಿ. ಕುಲಪತಿ ಹುದ್ದೆ 2024ರ ಮೇ 25ರಿಂದ ಖಾಲಿ ಇದೆ. ಆದರೆ ರಾಜ್ಯ ಸರಕಾರ ನೇಮಕ ಪ್ರಕ್ರಿಯೆ ನಡೆಸಿಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಹಲವಾರು ಬಾರಿ ನೆನಪೋಲೆ ಕಳುಹಿಸಲಾಗಿದೆ. ಈ ಮಧ್ಯೆ ರಾಜ್ಯ ಸರಕಾರವು ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ತಿದ್ದುಪಡಿ ಮಸೂದೆಗೆ ತಿದ್ದುಪಡಿ ತಂದಿದ್ದು, ಕೆಲವು ಸ್ಪಷ್ಟನೆಗಳೊಂದಿಗೆ ರಾಜಭವನದಿಂದ ವಾಪಸ್ ಕಳುಹಿಸಲಾಗಿದೆ. ಇದಕ್ಕೆ ಅಂಗೀಕಾರ ದೊರೆಯದೆ ಇರುವ ಹಿನ್ನೆಲೆಯಲ್ಲಿ ಚಾಲ್ತಿಯಲ್ಲಿರುವ ನಿಯಮಗಳೇ ಪ್ರಸ್ತುತವಾಗುತ್ತವೆ. ಹೀಗಾಗಿ ಹಳೇ ನಿಯಮದ ಪ್ರಕಾರ ವಿ.ವಿ.ಯ ಕುಲಪತಿ ಹುದ್ದೆ ಗೆ ತತ್‌ಕ್ಷಣ ನೇಮಕ ಮಾಡಿ ಎಂದು ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ರಾಜ್ಯಪಾಲರು ಸೂಚನೆ ನೀಡಿದ್ದಾರೆ.