ವಿಜಯಪುರ: ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ಹೊರಡಿಸಿರುವ ಸರ್ಕಾರದ ಉದ್ದೇಶವನ್ನು ರಾಜ್ಯಪಾಲರು ಸಂಪೂರ್ಣವಾಗಿ ಅರ್ಥೈಸಿಕೊಂಡಿಲ್ಲ, ತಪ್ಪು ಗ್ರಹಿಕೆ, ಮಾಹಿತಿ ಕೊರತೆಯಿಂದ ತಿರಸ್ಕರಿಸಿದ್ದಾರೆ ಎಂದು ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಗ್ರೀವಾಜ್ಞೆಯನ್ನು ತಿರಸ್ಕರಿಸಲು ರಾಜ್ಯಪಾಲರು ನೀಡಿರುವ ಕಾರಣಗಳ ಬಗ್ಗೆ ಸೂಕ್ತ ವಿವರವನ್ನು ನೀಡುವ ಮೂಲಕ ಅನುಮೋದಿಸುವಂತೆ ಮರು ಮನವಿ ಮಾಡಲಾಗುವುದು ಎಂದು ಹೇಳಿದರು.
ಕಾನೂನಾತ್ಮಕವಾಗಿ ನೋಂದಾಯಿತ ಸಂಸ್ಥೆ ಅಥವಾ ವ್ಯಕ್ತಿಗಳು ನಿಯಮಾನುಸಾರ ನೈಜ ಸಾಲ ನೀಡಿದವರು ವಸೂಲಿ ಮಾಡಬಾರದೆಂದು ಅಥವಾ ಅಂತಹ ಸಾಲಗಳು ವಸೂಲಿಗೆ ಅರ್ಹವಿಲ್ಲ ಎಂದು ಸರ್ಕಾರ ರಾಜ್ಯಪಾಲರಿಗೆ ಸಲ್ಲಿಸಿರುವ ಸುಗ್ರೀವಾಜ್ಞೆಯಲ್ಲಿ ಎಲ್ಲಿಯೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ಕೇವಲ ಸಾಲ ವಸೂಲಾತಿಗೆ ಕಾನೂನು ಬಾಹಿರ ಕ್ರಮಗಳನ್ನು ಕೈಗೊಳ್ಳುವುದು, ಹಿಂಸೆ ಮಾಡುವುದು ಮತ್ತು ಒತ್ತಡ ತಂತ್ರ ಹೇರುವುದು ಹಾಗೂ ಕಿರುಕುಳಕ್ಕೆ ಕಾರಣವಾಗುವುದನ್ನು ತಡೆಯಲು ಸುಗ್ರೀವಾಜ್ಞೆಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ತಿಳಿಸಿದರು.
ನೈಸರ್ಗಿಕ ನ್ಯಾಯ ಮತ್ತು ಯಾವುದೇ ವ್ಯಕ್ತಿಯ ಹಕ್ಕುಗಳಿಗೆ ಮತ್ತು ಕಾನೂನಾತ್ಮಕ ಹೋರಾಟಕ್ಕೆ, ಮೂಲಭೂತ ಹಕ್ಕುಗಳಿಗೆ ಧಕ್ಕೆ ತರುವಂತಹ ಯಾವುದೇ ಕ್ರಮ ಸುಗ್ರೀವಾಜ್ಞೆಯಲ್ಲಿ ಪ್ರಸ್ತಾಪಿಸಿಲ್ಲ ಎಂದರು.
ಸುಗ್ರೀವಾಜ್ಞೆಯಲ್ಲಿ 10 ವರ್ಷಗಳವರೆಗೆ ವಿಸ್ತರಿಸಬಹುದಾದ ಶಿಕ್ಷೆ ಮತ್ತು ₹5 ಲಕ್ಷದವರೆಗೆ ವಿಸ್ತರಿಸಬಹುದಾದ ದಂಡ ವಿಧಿಸಲು ಮುಂದಾಗಿರುವುದು ಹಾಗೂ ಜಾಮೀನು ರಹಿತ ಶಿಕ್ಷೆ ವಿಧಿಸುವುದು ನೈಸರ್ಗಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂಬ ರಾಜ್ಯಪಾಲರ ಆಕ್ಷೇಪ ಸರಿಯಲ್ಲ. ಸಾಲ ಕೊಟ್ಟಿರುವ ಮೊತ್ತ ಪರಿಗಣಿಸಿ ದಂಡ ಅಥವಾ ಶಿಕ್ಷೆ ವಿಧಿಸಿಲ್ಲ. ಸಾಲ ವಸೂಲಾತಿ ಪ್ರಕ್ರಿಯೆ ಸಂದರ್ಭದಲ್ಲಿ ಕಿರುಕುಳ, ಒತ್ತಡ ತಂತ್ರ, ಹಿಂಸೆ ಮಾಡುವ ಮೂಲಕ ವಸೂಲಾತಿಯ ಕ್ರಮಗಳಿಗೆ ದಂಡ ಮತ್ತು ಶಿಕ್ಷೆಯನ್ನು ಪ್ರಸ್ತಾಪಿಸಲಾಗಿದೆ. ಯಾವುದೇ ನೈಸರ್ಗಿಕ ನ್ಯಾಯಕ್ಕೆ ವಿರುದ್ಧವಾದ ಕ್ರಮವನ್ನು ಸರ್ಕಾರ ಪ್ರಸ್ತಾಪಿಸಿಲ್ಲ ಎಂದು ತಿಳಿಸಿದರು.
ನೋಂದಾಯಿತ ಸಂಸ್ಥೆಗಳು, ಬ್ಯಾಂಕುಗಳು ಮತ್ತು ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ ಸಾಲ ನೀಡುವಿಕೆ ಮತ್ತು ವಸೂಲಾತಿ ಪ್ರಕ್ರಿಯೆ ಬಗ್ಗೆ ಸುಗ್ರೀವಾಜ್ಞೆಯಲ್ಲಿ ಉಲ್ಲೇಖಿಸಿಲ್ಲ ಎಂದು ಹೇಳಿದರು.
ಸಾಲ ನೀಡಿದ ವ್ಯಕ್ತಿ ವಸೂಲಾತಿಗೆ ಕಾನೂನಿಗೆ ಗೊತ್ತಿರುವ ಮಾರ್ಗವನ್ನು ಮಾತ್ರ ಅನುಸರಿಸಬೇಕೆಂದು ಸುಗ್ರೀವಾಜ್ಞೆಯಲ್ಲಿ ಪ್ರಸ್ತಾಪಿಸಲಾಗಿದೆ ಎಂದರು.
ಈಗಿರುವ ಕಾಯ್ದೆಗಳಲ್ಲಿ ಬಾಧಿತ ಜನರ ಹಿತಾಸಕ್ತಿ ಕಾಪಾಡಲು ಯಾವುದೇ ಗಂಭೀರ ಮತ್ತು ನಿಯಂತ್ರಣ ಮಾಡುವ ಪರಿಣಾಮಕಾರಿಯಾದ ಅಸ್ತ್ರ ಇಲ್ಲದೇ ಇರುವುದರಿಂದ ಸಮಾಜದ ಕೆಳ ಸ್ತರದ ವ್ಯಕ್ತಿಗಳಿಗೆ ಮತ್ತು ಅಬಲರಿಗೆ ಸಬಲವಾದ ಅಸ್ತ್ರವನ್ನು ಕಾನೂನಾತ್ಮಕವಾಗಿ ಒದಗಿಸಬೇಕೆಂಬ ಉದ್ದೇಶದಿಂದ ಸರ್ಕಾರವು ಮುಖ್ಯಮಂತ್ರಿವರೆಗಿನ ಎಲ್ಲ ಹಂತಗಳಲ್ಲೂ ಸಮಾಲೋಚನೆಗಳನ್ನು ಮಾಡಿ, ಸುಗ್ರೀವಾಜ್ಞೆ ಹೊರಡಿಸಿದೆ ಎಂದು ಸಮರ್ಥಿಸಿಕೊಂಡರು.
ಸಾಲ ನೀಡುವವರ ಹಿತವನ್ನೂ ಸುಗ್ರೀವಾಜ್ಞೆಯಲ್ಲಿ ರಕ್ಷಿಸಲಾಗಿದೆ. ಸಾಲ ವಸೂಲಾತಿಯನ್ನು ನಿಷೇಧಿಸಿಲ್ಲ. ನಿಷೇಧಿತ ಚಟುವಟಿಕೆಗಳ ಮೂಲಕ ಸಾಲ ವಸೂಲಾತಿಯನ್ನು ತಡೆಯಲು ತುರ್ತಾಗಿ ಸುಗ್ರೀವಾಜ್ಞೆ ಹೊರಡಿಸಲಾಗಿದೆ ಎಂದರು.
ಈ ಸುಗ್ರೀವಾಜ್ಞೆಯು ಮಸೂದೆಯಾಗಿ ವಿಧಾನಮಂಡಲದಲ್ಲಿ ಚರ್ಚೆಗೆ ಸಹಜವಾಗಿ ಮಂಡಿಸಲಾಗುತ್ತದೆ. ಆ ಸಂದರ್ಭದಲ್ಲಿ ವಿಧಾನಮಂಡಲದ ಅಭಿಪ್ರಾಯಗಳನ್ನು ಕ್ರೋಢಿಕರಿಸಿ ವ್ಯಾಪಕ ಪರಿಣಾಮ ಬೀರುವ ಕಾಯ್ದೆಯನ್ನು ಅಂತಿಮಗೊಳಿಸಲಾಗುತ್ತದೆ ಎಂದು ತಿಳಿಸಿದರು.
ಸರ್ಕಾರವು ತುರ್ತು ಸಂದರ್ಭಗಳಲ್ಲಿ ಸುಗ್ರೀವಾಜ್ಞೆಯ ಮೂಲಕ ಜನರ ನೆರವಿಗೆ ಬರಬೇಕಾದ ಸಂವಿಧಾನದತ್ತ ಅವಕಾಶ ಇರುವುದರಿಂದ ಅದನ್ನು ಬಳಕೆ ಮಾಡಿಕೊಂಡು ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ಜಾರಿಗೆ ಶಿಫಾರಸು ಮಾಡಲಾಗಿದೆ. ರಾಜ್ಯ ಸರ್ಕಾರ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಿದೆ ಎಂಬುದನ್ನು ರಾಜ್ಯಪಾಲರ ಗಮನಕ್ಕೆ ತರುತ್ತೇನೆ ಎಂದರು.