ಬೆಂಗಳೂರು : ಜೆಡಿಎಸ್ ಹಾಗೂ ಬಿಜೆಪಿ ನಾಯಕರ ವಿರುದ್ಧದ ದೂರುಗಳನ್ನು ಭಾಷಾಂತರಿಸಿ ಕೊಡಿ ಎಂದು ದೂರು ಬಂದ ಸುಮಾರು ಒಂಬತ್ತು ತಿಂಗಳ ನಂತರ ರಾಜ್ಯಪಾಲರು ಕಡತಗಳನ್ನು ವಾಪಸ್ ಕಳಿಸಿದ್ದಾರೆ.
ರಾಜ್ಯಪಾಲರು ಉದ್ದೇಶಪೂರ್ವಕವಾಗಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಹೇಳಲು ಇದು ಸ್ಪಷ್ಟ ಉದಾಹರಣೆಯಾಗಿದೆ. ಅವರು ಈ ರೀತಿಯ ತಾರತಮ್ಯ ಮಾರ್ಗವನ್ನು ಅನುಸರಿಸದೆ ತಮ್ಮ ರಾಜ ಧರ್ಮ ಪಾಲಿಸಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರು ತಮ್ಮ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಭಾಷಾಂತರದ ಅವಶ್ಯಕತೆ ಇದ್ದಲ್ಲಿ ದೂರು ಬಂದ ತಕ್ಷಣವೇ ಭಾಷಾಂತರಕ್ಕೆ ಒತ್ತಾಯಿಸಿ ಕಡತಗಳನ್ನು ಸರ್ಕಾರ ಅಥವಾ ದೂರು ಸಲ್ಲಿಸಿದ ತನಿಖಾ ಸಂಸ್ಥೆಗೆ ಕಳಿಸಬೇಕಿತ್ತು. ಒಂಬತ್ತು ತಿಂಗಳು ಸುಮ್ಮನಿದ್ದು ಈಗ ಕಳಿಸಿರುವುದು ಕೇವಲ ಕಾಲಹರಣದ ತಂತ್ರವಾಗಿದೆ. ಅದೂ ಅಲ್ಲದೆ ರಾಜ ಭವನದಲ್ಲಿ ಏನೆಲ್ಲ ಅನುಕೂಲ, ಸೌಲಭ್ಯಗಳಿರುವಾಗ ಅಲ್ಲಿ ಒಬ್ಬರು ಭಾಷಾಂತರ ಸಿಬ್ಬಂದಿ ಇಲ್ಲದೆ ಇರುವುದೂ ಕೂಡ ಆಶ್ಚರ್ಯದ ಸಂಗತಿ ಎಂದು ಮಜೀದ್ ಅವರು ತಮ್ಮ ಪ್ರಕಟಣೆಯ ಮೂಲಕ ಅಸಮಾಧಾನ ಹೊರ ಹಾಕಿದರು.
ರಾಜ್ಯಪಾಲರು ರಾಜ್ಯದ ಹಿತ ಕಾಪಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ದೆಹಲಿಯಿಂದ ಬರುವ ಪ್ರಧಾನಿ ಮೋದಿ ಮತ್ತು ಅವರ ಸರ್ಕಾರದ ಒತ್ತಡಗಳಿಗೆ ಮಣಿಯಬಾರದು. ಅವರಿಗೆ ಸಲ್ಲಿಸಲಾಗುವ ಎಲ್ಲ ದೂರುಗಳನ್ನೂ ಒಂದೇ ರೀತಿಯಲ್ಲಿ ನೋಡಬೇಕು ಮತ್ತು ಕಾಂಗ್ರೆಸ್ ನಾಯಕರ ವಿರುದ್ಧದ ದೂರುಗಳ ತನಿಖೆಗೆ ಅನುಮತಿ ನೀಡಿದ ರೀತಿ ಮತ್ತು ವೇಗದಲ್ಲೇ ಜೆಡಿಎಸ್ ಹಾಗೂ ಬಿಜೆಪಿ ನಾಯಕರ ವಿರುದ್ಧ ಬಂದಿರುವ ದೂರುಗಳಿಗೂ ಸ್ಪಂದಿಸಿ ಸೂಕ್ತ ತನಿಖಾ ಅನುಮತಿ ನೀಡಬೇಕು ಎಂದು ಮಜೀದ್ ಅವರು ತಮ್ಮ ಪ್ರಕಟಣೆಯ ಮೂಲಕ ರಾಜ್ಯಪಾಲರನ್ನು ಒತ್ತಾಯಿಸಿದ್ದಾರೆ.