ಚಿಕ್ಕಮಗಳೂರು, ಜುಲೈ 14 : ರಾಜ್ಯದ ಅತ್ಯಂತ ಎತ್ತರದ ಶಿಖರ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ಸೌಂದರ್ಯ ರಾಶಿಗೆ ಸಂಚಕಾರ ಎದುರಾಗಿದೆ. ಈ ನಿಸರ್ಗದ ರಾಶಿಯಲ್ಲಿ ಸರ್ಕಾರ ರೋಪ್ ವೇ ನಿರ್ಮಾಣಕ್ಕೆ ಅಧ್ಯಯನ ನಡೆಸಿದೆ. ಗಿರಿಶ್ರೇಣಿಯಲ್ಲಿ ತಜ್ಞರ ತಂಡ ಪರಿಶೀಲನೆ ನಡೆಸಿದ್ದು, ಐದು ಸ್ಥಳಗಳನ್ನು ಗುರುತಿಸಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ರೋಪ್ ವೇ ನಿರ್ಮಾಣ ಮಾಡುವ ಪ್ರಸ್ತಾಪವನ್ನ ಹಿಂದಿನ ರಾಜ್ಯ ಬಜೆಟ್ ನಲ್ಲಿ ಮಾಡಲಾಗಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದ ಯೋಜನೆ ಇದಾಗಿದ್ದು, ಪರ್ವತ ಮಾಲಾ ಯೋಜನೆಯಿಂದಲೂ ಅನುದಾನ ಪಡೆದು ರೋಪ್ ವೇ ನಿರ್ಮಿಸುವುದು ರಾಜ್ಯ ಸರ್ಕಾರದ ಉದ್ದೇಶ. ತಾಲೂಕಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಬಾಬಾಬುಡನ್‌ಗಿರಿ, ದೇವೀರಮ್ಮನ ಬೆಟ್ಟಗಳ ಸಾಲುಗಳಿವೆ. ಅತ್ಯಪರೂಪ ಶೋಲಾ ಅರಣ್ಯ ಈ ಗಿರಿಶ್ರೇಣಿಯ ವೈಶಿಷ್ಟ್ಯ.
ಯಗಚಿ, ವೇದಾವತಿ ಸೇರಿ ಹಲವು ನದಿಗಳ ಉಗಮ ಸ್ಥಾನ ಕೂಡ ಇದೇ ಗುಡ್ಡಗಳು. ಝರಿ, ಜಲಪಾತಗಳು, ಹಸಿರ ಕಾನನದ ತಾಣ. ಹುಲಿ, ಚಿರತೆ, ಆನೆ, ಜಿಂಕೆ ಸೇರಿದಂತೆ ವನ್ಯಜೀವಿ ಸಂಕುಲದ ಆವಾಸ ಸ್ಥಾನ ಕೂಡ. ಇಂತಹ ನೈಸರ್ಗಿಕವಾದ ಸುಂದರ ರಮಣೀಯ ತಾಣದಲ್ಲಿ ಪ್ರವಾಸಿಗರ ಸಂಖ್ಯೆ ಕೂಡ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಈಗಾಗಲೇ ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಗಳನ್ನ ಒಳಗೊಂಡ ತಜ್ಞರ ತಂಡ, ಮುಳ್ಳಯ್ಯನಗಿರಿ ಪ್ರದೇಶಕ್ಕೆ ಭೇಟಿ ನೀಡಿ ಐದು ಸ್ಥಳಗಳನ್ನ ಗುರುತು ಮಾಡಿದೆ.
ಮುಳ್ಳಯ್ಯನಗಿರಿ, ಕವಿಕಲ್ಗಂಡಿ, ದತ್ತಪೀಠ ಟವರ್ ಪಾಯಿಂಟ್, ಮಾಣಿಕ್ಯಧಾರ ಸೇರಿದಂತೆ ಗಿರಿಯಿಂದ ಕೆಳಗೆ ಕಾಣಿಸುವ ತಿರುವು ರಸ್ತೆಯ ಜಂಕ್ಷನ್ ಸೇರಿ ಐದು ಕಡೆ ಸ್ಥಳ ಪರಿಶೀಲನೆ ನಡೆಸಿದೆ. ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಗಳು ಕಾಶ್ಮೀರದಲ್ಲಿ ರೋಪ್ ವೇ ನಿರ್ಮಿಸಿರುವ ಪರಿಣಿತರು ಈ ತಂಡದಲ್ಲಿದ್ದರು. ಕಾಡು ಕಡಿಯದೇ ಜೀವ ವೈವಿಧ್ಯಕ್ಕೂ ಧಕ್ಕೆಯಾಗದಂತೆ ರೋಪ್ ವೇ ನಿರ್ಮಾಣ ಮಾಡುವುದು ಹೇಗೆ ಎಂಬುದನ್ನು ಈ ತಂಡ ಅಧ್ಯಯನ ನಡೆಸಿದೆ. ಆದರೆ ಈ ಬಗ್ಗೆ ಪರಿಸರವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಪ್ರಪಂಚದಲ್ಲಿ ಅತ್ಯಂತ ಅಮೂಲ್ಯವಾದ ಸಸ್ಯಸಂಪತ್ತನ್ನು ಗಿರಿ ಪ್ರದೇಶ ಹೊಂದಿದೆ. ಸ್ವಚ್ಛಂದ ಗಾಳಿ, ಪ್ರಾಣಿ-ಪಕ್ಷಿಗಳ ಓಡಾಟಕ್ಕೆ ರೋಪ್ ವೇ ಅಡ್ಡಿಯಾಗಲಿದೆ. ಈ ಯೋಜನೆಯನ್ನು ಸರ್ಕಾರ ಕೈಬಿಡಬೇಕು ಇಲ್ಲದಿದ್ದರೆ ಕಾನೂನು ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಒಟ್ಟಾರೆ, ಪ್ರವಾಸೋಧ್ಯಮಕ್ಕೆ ಉತ್ತೇಜನ ನೀಡಲು ಹಲವು ಪ್ರವಾಸಿ ತಾಣಗಳಿವೆ. ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳನ್ನು ಇನ್ನಷ್ಟು ಅಭಿವೃದ್ದಿಗೊಳಿಸಿ ಮೂಲಭೂತ ಸೌಲಭ್ಯ ನೀಡಿದರೆ ಸಾಕು. ಸರ್ಕಾರ ಅದನ್ನು ಬಿಟ್ಟು ಸ್ವಚ್ಚಂದ ಗಾಳಿ, ಪರಿಸರವನ್ನು ಹೊಂದಿರುವ ಸ್ಥಳದಲ್ಲಿ ರೋಪ್ ವೇ ಯೋಜನೆಯನ್ನು ಜಾರಿ ಮಾಡುವ ಮೂಲಕ ಪರಿಸರಕ್ಕೆ ಮಾರಕವಾಗುತ್ತಿದೆ ಎನ್ನುವುದು ಪರಿಸರವಾದಿಗಳ ವಾದವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ಮಾಡುವ ಅಗತ್ಯ ಇದ್ದು ಸರ್ಕಾರ ಮುಂದಿನ ದಿನಗಳಲ್ಲಿ ಯಾವ ನಿರ್ಧಾರ ಕೈಗೊಳ್ಳುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.